ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕಾಂಗ್ರೆಸ್ 5% ಕಮಿಷನ್ ಕೇಳುತ್ತಿದೆ ಎಂದ ಕುಮಾರಸ್ವಾಮಿ!

H D Kumaraswamy
Published on

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ವಿರುದ್ಧ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು ''ಹಿಂದಿನ ಬಿಜೆಪಿ ಸರಕಾರದ ಸಮಯದಲ್ಲಿ ನಡೆದಿದ್ದ ಕಾಮಗಾರಿಗಳ ಹಣ ಬಿಡುಗಡೆ ಮಾಡಲು ನೂತನ ಕಾಂಗ್ರೆಸ್‌ ಸರಕಾರ ಪರ್ಸೆಂಟೇಜ್‌ ಫಿಕ್ಸ್‌ ಮಾಡಿದೆ. 40 ಪರ್ಸೆಂಟ್‌ ಜತೆಗೆ, ಹೆಚ್ಚುವರಿಯಾಗಿ ಶೇ.5ರಷ್ಟು ಸೇರಿಸಿ ಗುತ್ತಿಗೆದಾರರಿಂದ ವಸೂಲಿ ಮಾಡುತ್ತಿದ್ದು, ಇದು ಶೇ. 45 ಪರ್ಸೆಂಟ್‌ ಸರಕಾರ,'' ಎಂದು ಹೇಳಿದ್ದಾರೆ.

ರಾಜ್ಯ ಜೆಡಿಎಸ್ ಕಛೇರಿಯಲ್ಲಿ ಶರನಿವಾರ ಸುದ್ದಿಗೋಷ್ಟಿಯನ್ನು ನಡೆಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ಕೆ, “ಬಿಜೆಪಿ ಸರಕಾರ 600 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿತ್ತು. ಕಳೆದ ಮೇ 6ರಂದು ಒಟ್ಟು 675 ಕೋಟಿ ರೂ. ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಎಲ್‌ಒಸಿ ಬಿಡುಗಡೆಯಾಯಿತು. ಆದರೆ, ಈ ಹಣ ಬಿಡುಗಡೆಯಾಗದಂತೆ ತಡೆಹಿಡಿದಿದ್ದು ಏಕೆ ಎಂಬ ಪ್ರಶ್ನೆಯಲ್ಲೇ ವಸೂಲಿ ದಂಧೆಯ ವಿವರ ಸಿಗುತ್ತದೆ” ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ 45% ಸರ್ಕಾರ…”

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ, “ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗಬೇಕಾದರೆ ಕಮಿಷನ್ ಕೊಡಲೇಬೇಕು. 40 ಪರ್ಸೆಂಟ್‌ ಜತೆಗೆ, ಹೆಚ್ಚುವರಿಯಾಗಿ 5 ಪರ್ಸೆಂಟ್‌ ಕೊಟ್ಟರೆ ಮಾತ್್ರವೇ ಹಣ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರಂತೆ. ಹಾಗಾಗಿ, ಇದು 45 ಪರ್ಸೆಂಟ್‌ ಸರಕಾರ ಎಂದಾಯಿತಲ್ಲ? ಮುಗಿದಿರುವ ಕಾಮಗಾರಿಗಳಿಗೆ ಪರ್ಸೆಂಟೇಜ್‌ ಕೇಳುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಸತ್ಯಹರಿಶ್ಚಂದ್ರರು ಮಾಡುತ್ತಿರುವ ಕೆಲಸ ಇದು '' ಎಂದು ಕಿಡಿಕಾರಿದರು.

“ಸಚಿವರು ವಿದೇಶದಲ್ಲಿದ್ದಾಗ ವರ್ಗಾವಣೆ ಮಾಡಿದ ಸಿಎಂ…”

ಇನ್ನು ಅಧಿಕಾರಿಗಳ ವರ್ಗಾವಣೆ ಕುರಿತಾಗಿ ಮಾತನಾಡಿದ ಕುಮಾರಸ್ವಾಮಿ, “ವಿದೇಶ ಪ್ರವಾಸದಲ್ಲಿರುವ ಆ ಸಚಿವರು ಯಾರು? ಆ ಸಚಿವರ ಗಮನಕ್ಕೆ ಬಾರದೆ ಅವರ ಇಲಾಖೆಗೆ ಪೋಸ್ಟಿಂಗ್‌ ಆದ ಆ ಅಧಿಕಾರಿ ಯಾರು ಎಂಬುದು ಗೊತ್ತಿದೆ.

ಸಿಎಂ ಅವರೇ ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಸಂಬಂಧಪಟ್ಟ ಸಚಿವರು ವಿದೇಶದಲ್ಲಿದ್ದಾರೆ. ಸಿಎಂ ಆದೇಶ ಮಾಡಿದ್ದರೂ, ತಾವು ಬರುವವರೆಗೂ ಅಧಿಕಾರ ವಹಿಸಿಕೊಳ್ಳದಂತೆ ಸಚಿವರು ತಾಕೀತು ಮಾಡಿದ್ದಾರೆ. ಹಾಗಾದರೆ ಎಷ್ಟು ಹಣ ಕೊಟ್ಟು ಈ ಅಧಿಕಾರಿ ಪೋಸ್ಟಿಂಗ್‌ ಪಡೆದಿದ್ದಾರೆ?” ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net