ಇಂದು ಮಧ್ಯಾಹ್ನದಿಂದ ಎಲ್ಲಾ ಮಹಿಳೆಯರಿಗೂ ಬಸ್ ಫ್ರೀ! ಆದರೆ ಪಾಲಿಸಬೇಕಾದ ನಿಯಮಗಳು ಹೀಗಿವೆ…

Congress Bus Guarantee
Published on

ಬೆಂಗಳೂರು: ಇಂದು ಶಕ್ತಿ ಯೋಜನೆಗೆ ಚಾಲನೆ ಸಿಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನಾ ಕೆಎಸ್ ಆರ್ಟಿಸಿ ಬಸ್ ನಿಲ್ದಾಣ, ಮದುವೆ ಮನೆ ರೀತಿ ಸಿದ್ದವಾಗಿದೆ. ಇಂದಿನಿಂದ ರಾಜ್ಯದೊಳಗಿನ ಮಹಿಳಾ ಮತ್ತು ಲೈಂಗಿಕ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶ ಸಿಗಲಿದ್ದು ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿ ಟರ್ಮಿನಲ್ಅಲ್ಲೂ ಹೂ ಹಾರ ಹಾಕಿ ಸಿಂಗಾರ ಮಾಡಲಾಗಿದೆ. ಎಂಟು ಬಸ್ ಗಳಿಗೆ ಇಂದು ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ಸಿಗಲಿದೆ. ಫ್ರೀ ಇದ್ದರೂ, ಅದಕ್ಕೆ ಕೆಲ ಹೊಸ ಷರತ್ತುಗಳನ್ನು ಸರ್ಕಾರ ಹಾಕಿದೆ.

ಇಂದು ಮಧ್ಯಾಹ್ನ 1 ಗಂಟೆಯಿಂದಲೇ ರಾಜ್ಯವ್ಯಾಪಿ ಉಚಿತ ಪ್ರಯಾಣ ಶುರುವಾಗಲಿದ್ದು ಬಸ್ಸು ಫ್ರೀ ಆದರೂ ಮಹಿಳೆಯರು ಹಾಗೆಯೇ ಕಣ್ಮುಚ್ಚಿ ಹಾಯಾಗಿ ಪ್ರವಾಸ ಮಾಡುವುದು ಸ್ವಲ್ಪ ಕಷ್ಟ. ಅದಕ್ಕೆ ಕಾರಣ ಕೆಲ ನಿಯಮಗಳು. ನೀವೂ ಉಚಿತವಾಗಿ ಪ್ರಯಾಣಿಸಲು ಬಯಸುತ್ತೀರಾ? ಹಾಗಾದರೆ ನೀವು ಈ ನಿಯಮಗಳನ್ನು ಅನುಸರಿಸಲೇ ಬೇಕು. ಈ ನಿಯಮಗಳು ಇಂತಿವೆ:

ಫ್ರೀ ಸಂಚಾರ ಅಂತ ಬರೀ ಕೈಯಲ್ಲಿ ಹೋದರೆ ಫ್ರೀ ಸಂಚಾರಕ್ಕಿಲ್ಲ ಅವಕಾಶ.!

ಹೌದು! ನೀವು ಮಹಿಳೆ ಎಂದ ಮಾತ್ರಕ್ಕೆ ಖಾಲಿ ಕೈಯಲ್ಲಿ ಬಸ್ಸು ಹತ್ತಿ ಉಚಿತವಾಗಿ ಹೋಗುವುದು ಅಸಾಧ್ಯ. ನಿಮ್ಮಲ್ಲಿ ಬಸ್ ಸಂಚಾರದ ವೇಳೆ ಸರ್ಕಾರಿ ದಾಖಲೆ ಇಲ್ಲದೇ ಹೋದಲ್ಲಿ ನೀವು ಟಿಕೆಟ್ ಖರೀದಿಸುವುದು ಕಡ್ಡಾಯವಾಗಲಿದೆ. ನಿಮ್ಮ ಪ್ರಯಾಣ ಉಚಿತವಾಗಲು ಸರ್ಕಾರಿ ದಾಖಲೆ ತೋರಿಸಲೇ ಬೇಕು.

ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ಧೃಡಿಕರಣಪತ್ರ ಗಳಲ್ಲಿ ಯಾವುದಾದರೂ ಒಂದನ್ನು ನಿರ್ವಾಹಕರಿಗೆ ತೋರಿಸಿದರೂ ಸಾಕು. ಮಹಿಳೆಯರ ಪ್ರಯಾಣ ಉಚಿತವಾಗಲಿದೆ.

ಈ ವ್ಯವಸ್ಥೆ ತಾತ್ಕಾಲಿಕವಾಗಿರಲಿದ್ದು ಮೂರು ತಿಂಗಳ ಒಳಗಾಗಿ ಉಚಿತ ಬಸ್ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆಯಲು ಅಪ್ಲೈ ಮಾಡಬೇಕು. ನಂತರ ಸ್ಮಾರ್ಟ್ ಕಾರ್ಡ್ ಇಲ್ಲದಿದ್ದಲ್ಲಿ ಟಿಕೆಟ್ ಖರೀದಿಸಲೇ ಬೇಕು.

ಸೀಟ್ ಸಿಗುವುದು ಮೀಸಲಾತಿ ಲೆಕ್ಕಾಚಾರದಲ್ಲಿ!

ಬಿಎಂಟಿಸಿ ಹೊರತುಪಡಿಸಿ ಉಳಿದ ಬಸ್ ಗಳಲ್ಲಿ 50% ರಷ್ಟು ಸೀಟುಗಳಲ್ಲಿ ಮಾತ್ರ ಕುಳಿತು ಪ್ರಯಾಣ ಮಾಡಬೇಕು. ಅಂದರೆ ಮೀಸಲಾತಿ ಲೆಕ್ಕಚಾರದಲ್ಲಿ ಪ್ರತಿ ಬಸ್ ನಲ್ಲಿ 25 ಜನ ಮಹಿಳೆಯರಿಗೆ ಮಾತ್ರ ಸಂಚಾರ ಮಾಡಬಹುದು.

ಲಗೇಜ್ ತೂಕಕ್ಕೂ ಮಿತಿಯಿದೆ!

ಮಹಿಳೆಯರು, ಉಚಿತ ಪ್ರಯಾಣ ಎಂದು ಬೇಕಾಬಿಟ್ಟಿಯಾಗಿ ಲಗೇಜ್ ಸಾಗಾಟ ಮಾಡುವುದನ್ನು ತಪ್ಪಿಸಲು ನಿಗಧಿತ ಲಗೇಜಿನ ತೂಕಕ್ಕಿಂತ ಹೆಚ್ಚು ತೂಕದ ಲಗೇಜ್ ಕೊಂಡೊಯ್ದರೇ ಹಣ ಪಾವತಿ ಮಾಡಲೇಬೇಕು ಎಂಬ ನಿಯಮ ಮಾಡಲಾಗಿದೆ.

ಅದಲ್ಲದೇ ಐಷಾರಾಮಿ ಬಸ್, ಎಸಿ ಬಸ್, ನಾನ್‌ ಎಸಿ ಬಸ್, ರಾಜಹಂಸ, ಸ್ಲೀಪರ್ ಕೋಚ್, ವಜ್ರ, ವಾಯುವಜ್ರ, ಐರಾವತ, ಅಂಬಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net