

ನವದೆಹಲಿ: ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಸಂಸ್ಥೆಯಲ್ಲೇ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿರುವುದು ಕಂಡುಬಂದಿದೆ.
ಅದರಲ್ಲೂ ಸಂಸ್ಥೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಸ್ಥಗಿತಗೊಳಿಸಿದ ಬಳಿಕ ಮಹಿಳಾ ಉದ್ಯೋಗಿಗಳ ರಾಜೀನಾಮೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಉದ್ಯೋಗ ತೊರೆಯುವಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿದ್ದಾರೆ. ವರ್ಕ್ ಫ್ರಮ್ ಹೋಮ್ ಸ್ಥಗಿತಗೊಳಿಸಿದ್ದೂ ಇದಕ್ಕೆ ಕಾರಣವಿರಬಹುದು ಎಂದು ಟಿಸಿಎಸ್ ಸಂಸ್ಥೆ ಹೇಳಿಕೊಂಡಿದೆ.
ಸುಮಾರು ಆರು ಲಕ್ಷದಷ್ಟಿರುವ ಉದ್ಯೋಗಿಗಳ ಪೈಕಿ ಮಹಿಳೆಯರೇ ಶೇ. 35ರಷ್ಟಿದ್ದರೂ ಉದ್ಯೋಗ ತೊರೆಯುತ್ತಿರುವ ಮಹಿಳೆಯರ ಪ್ರಮಾಣ ಪುರುಷರಿಗೆ ಸಮನಾಗಿರುವುದು ಅಸಹಜ ಬೆಳವಣಿಗೆ ಎಂದು ಸಂಸ್ಥೆಯ ಮುಖ್ಯ ಮಾನವಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಅಭಿಪ್ರಾಯ ಪಟ್ಟಿದ್ದಾರೆ.
ಕರೊನಾ ಸಾಂಕ್ರಾಮಿಕದ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಹಳಷ್ಟು ಮಹಿಳೆಯರು ಅದಕ್ಕೆ ಒಗ್ಗಿ ಹೋದಂತಿದೆ. ಪರಿಸ್ಥಿತಿ ಎಲ್ಲೆಡೆ ಸಹಜಸ್ಥಿತಿಗೆ ಬಂದ ಬಳಿಕ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಸ್ಥಗಿತಗೊಳಿಸಿದ್ದು, ಮಹಿಳೆಯರು ಕಚೇರಿಗೆ ಮರಳಲು ಆಸಕ್ತಿ ತೋರುತ್ತಿಲ್ಲ ಎಂಬುದನ್ನು ಅವರು ಕಂಪನಿಯ ವಾರ್ಷಿಕ ವರದಿಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಕೆಲಸದಿಂದ ಹೊರಗುಳಿಯುತ್ತಿರುವ ಮಹಿಳೆಯರ ಪ್ರಮಾಣದ ಕುರಿತು ವಾರ್ಷಿಕ ವರದಿಯಲ್ಲಿ ನಿಖರವಾಗಿ ಉಲ್ಲೇಖಿಸದಿದ್ದರೂ ಒಟ್ಟಾರೆ ಹೊರಗುಳಿಯುವಿಕೆಯು ಕಳೆದ ಹಣಕಾಸು ವರ್ಷದ ಮಧ್ಯದಲ್ಲಿ ಉತ್ತುಂಗಕ್ಕೇರಿತ್ತು ಮತ್ತು ಮಾರ್ಚ್ ಅಂತ್ಯದ ವೇಳೆಗೆ ಶೇ.20ಕ್ಕಿಂತ ಕಡಿಮೆಯಾಗಿದೆ ಎಂಬುದು ಕಂಡುಬಂದಿದೆ. - ಏಜೆನ್ಸೀಸ್