

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಿಗ್ ಬಿ ಅಮಿತಾಭ್ ಬಚ್ಚನ್ 32 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಈ ಇಬ್ಬರು ಸ್ಟಾರ್ಗಳ ಸಂಗಮದ ಅದ್ಧೂರಿ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬಂಡವಾಳ ಹಾಕುತ್ತಿದೆ.
'ಇಂಡಿಯನ್', 'ಖೈದಿ ನಂಬರ್ 150', '2.0', 'ದರ್ಬಾರ್' ಹಾಗೂ 'ಪೊನ್ನಿಯಿನ್ ಸೆಲ್ವನ್'ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ 'ಲೈಕಾ ಪ್ರೊಡಕ್ಷನ್ಸ್' ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಈ ಸಂಸ್ಥೆ ಹಣ ಸುರಿಯುತ್ತಿದೆ.
ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಪ್ರಮುಖರಾಗಿರುವ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಈ ಹಿಂದೆ 'ಅಂಧಾ ಕಾನೂನ್', 'ಗಿರಾಫ್ತಾರ್' ಮತ್ತು 'ಹಮ್' ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಇಬ್ಬರೂ ಜೊತೆಯಾಗಿ ಮತ್ತೆ ತೆರೆ ಮೇಲೆ ಕಾಣಸಿಕೊಳ್ಳಲು ಸಜ್ಜಾಗಿದ್ದಾರೆ. 'ಲೈಕಾ ಪ್ರೊಡಕ್ಷನ್ಸ್' ಅದ್ಧೂರಿ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಸಿನಿಮಾ ಮುಂದಿನ ತಿಂಗಳಾಂತ್ಯದಲ್ಲಿ ಟೇಕಾಫ್ ಆಗಲಿದೆ.
ರಜನಿ-ಬಚ್ಚನ್ ಅಭಿನಯದ ಈ ಚಿತ್ರವನ್ನು 'ಜೈ ಭೀಮ್' ಖ್ಯಾತಿಯ ಟಿ.ಜೆ.ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. 'ಜೈ ಭೀಮ್' ಮೂಲಕ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ರಜನಿ-ಬಚ್ಚನ್ ಅಭಿನಯದ ಈ ಅದ್ಧೂರಿ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿರುವುದು ಚಿತ್ರದ ಕುರಿತ ಕುತೂಹಲವನ್ನು ಹೆಚ್ಚಿಸಿದೆ. -ಏಜೆನ್ಸೀಸ್