ಮುಂಬೈ: ಚೀನಾದ ಸ್ಮಾರ್ಟ್‌ಫೋನ್ ಕಂಪನಿ ವಿವೊದ ಭಾರತೀಯ ಘಟಕದಲ್ಲಿ ಪ್ರಮುಖ ಪಾಲನ್ನು ಖರೀದಿಸುವ ಉತ್ಸಾಹದಲ್ಲಿದೆ ಟಾಟಾ ಗ್ರೂಪ್. ಈ ನಿಟ್ಟಿನಲ್ಲಿ ಟಾಟಾ ಗ್ರೂಪ್ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದೆ.
ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಈ ಸಂಭಾಷಣೆ ನಡೆಯುತ್ತಿದೆ. ಟಾಟಾದ ಆಫರ್ಗಿಂತ ಚೀನಾ ಕಂಪನಿ ಹೆಚ್ಚು ಬೇಡಿಕೆ ಇಡುತ್ತಿದೆ. ಟಾಟಾ ಒಪ್ಪಂದದ ಬಗ್ಗೆ ಆಸಕ್ತಿ ಹೊಂದಿದೆ. ಆದರೆ, ಇನ್ನೂ ಯಾವುದನ್ನೂ ನಿರ್ಧರಿಸಲಾಗಿಲ್ಲ. ಟಾಟಾ ಸನ್ಸ್ ಮತ್ತು ವಿವೋ ಇಂಡಿಯಾದಿಂದ ಅಧಿಕೃತವಾಗಿ ಏನನ್ನೂ ಹೇಳಲಾಗಿಲ್ಲ.
ಸರ್ಕಾರದ ಕಟ್ಟುನಿಟ್ಟಿನ ನಂತರ, ಚೀನಾದ ಕಂಪನಿ ವಿವೊ ಭಾರತದಲ್ಲಿ ಉತ್ಪಾದನೆ ಮತ್ತು ವಿತರಣೆ ಸೇರಿದಂತೆ ದೇಶೀಯ ಕಂಪನಿಗಳನ್ನು ತನ್ನ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳುವ ಆಯ್ಕೆಗಳನ್ನು ಅನ್ವೇಷಿಸುವ ಸಮಯದಲ್ಲಿ ಈ ಸುದ್ದಿ ಬಂದಿದೆ.
ದೇಶದಲ್ಲಿ ಹೆಚ್ಚುತ್ತಿರುವ ತನಿಖೆಗಳ ಮಧ್ಯೆ, ಚೀನಾದ ಕಂಪನಿಗಳಾದ ವಿವೊ ಮತ್ತು ಒಪ್ಪೊ ತಮ್ಮ ಸ್ಥಳೀಯ ಘಟಕಗಳಿಗಾಗಿ ಭಾರತೀಯ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿವೆ. ವಾಸ್ತವವಾಗಿ, ಚೀನಾದ ಹ್ಯಾಂಡ್‌ಸೆಟ್ ಕಂಪನಿಯೊಂದಿಗೆ ಸಂಭವನೀಯ ಜಂಟಿ ಉದ್ಯಮದಲ್ಲಿ ಭಾರತೀಯ ಪಾಲುದಾರರ ಪಾಲು ಕನಿಷ್ಠ 51 ಪ್ರತಿಶತದಷ್ಟು ಇರಬೇಕೆಂದು ಭಾರತ ಸರ್ಕಾರ ಬಯಸುತ್ತದೆ. ಜಂಟಿ ಉದ್ಯಮವು ಸ್ಥಳೀಯ ನಾಯಕತ್ವ ಮತ್ತು ಸ್ಥಳೀಯ ವಿತರಣೆ ಹೊಂದಬೇಕೆಂದು ಸರ್ಕಾರ ಬಯಸುತ್ತದೆ.
ತೆರಿಗೆ ಪಾವತಿಸುವುದನ್ನು ತಪ್ಪಿಸಲು ವಿವೊ ತನ್ನ ಆದಾಯದ ದೊಡ್ಡ ಮೊತ್ತವನ್ನು ತನ್ನ ಚೀನೀ ಮೂಲ ಕಂಪನಿಗೆ ಕಳುಹಿಸಿದೆ ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಉಲ್ಲಂಘನೆಯ ಆರೋಪದ ಕುರಿತಂತೆ ಜಾರಿ ನಿರ್ದೇಶನಾಲಯದಿಂದ ಕಂಪನಿ ವಿರುದ್ಧ ತನಿಖೆ ನಡೆಯುತ್ತಿದೆ.
ರಿಜಿಸ್ಟ್ರಾರ್ ಆಫ್ ಕಂಪನೀಸ್ (ROC) ಪ್ರಕಾರ, 29,874.90 ಕೋಟಿ ರೂ.ಗಳ ಕಾರ್ಯಾಚರಣೆಗಳ ಆದಾಯದೊಂದಿಗೆ ವಿವೊ ಇಂಡಿಯಾ 2022-23ನೇ ಹಣಕಾಸು ವರ್ಷದಲ್ಲಿ 211 ಕೋಟಿ ರೂ.ಗಳ ಎರಡನೇ ಅತಿ ಹೆಚ್ಚು ಲಾಭವನ್ನು ವರದಿ ಮಾಡಿದೆ. ಇದೇ ಸಮಯದಲ್ಲಿ, 2022ರ ಆರ್ಥಿಕ ವರ್ಷದಲ್ಲಿ ಇದು 26,971.11 ಕೋಟಿ ರೂ. ಇದೆ. ಈ ಕಂಪನಿಯು 2022 ರ ಹಣಕಾಸು ವರ್ಷದಲ್ಲಿ 123 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿದೆ.
ಟಾಟಾ ಗ್ರೂಪ್ ತನ್ನ ಅಂಗಸಂಸ್ಥೆಯಾದ ಟಾಟಾ ಎಲೆಕ್ಟ್ರಾನಿಕ್ಸ್ ಮೂಲಕ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವನ್ನು ಪ್ರವೇಶಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಕಳೆದ ನವೆಂಬರ್‌ನಲ್ಲಿ ತೈವಾನಿ ವಿಸ್ಟ್ರಾನ್‌ನ ಸ್ಥಳೀಯ ಕಾರ್ಯಾಚರಣೆಗಳನ್ನು 125 ಮಿಲಿಯನ್ ಡಾಲರ್ (ರೂ. 1,000 ಕೋಟಿ)ಗೆ ಸ್ವಾಧೀನಪಡಿಸಿಕೊಂಡಿತು. ಇದು ಐಫೋನ್ ತಯಾರಿಸಿದ ಮೊದಲ ಭಾರತೀಯ ಕಂಪನಿಯಾಗಿದೆ.
ಗುಂಪು ಈಗ ಆ್ಯಪಲ್ ಕಾಂಟ್ರಾಕ್ಟ್ ತಯಾರಕ ಪೆಗಾಟ್ರಾನ್ ಜತೆಗೆ ಚೆನ್ನೈ ಬಳಿಯ ತನ್ನ ಐಫೋನ್ ಉತ್ಪಾದನಾ ಘಟಕದಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಮಾತುಕತೆ ನಡೆಸುತ್ತಿದೆ.
ಏತನ್ಮಧ್ಯೆ, ಗ್ರೇಟರ್ ನೋಯ್ಡಾದಲ್ಲಿರುವ ವಿವೊದ ಉತ್ಪಾದನಾ ಕಾರ್ಖಾನೆಯನ್ನು ಭಗವತಿ ಪ್ರಾಡಕ್ಟ್ಸ್ (ಮೈಕ್ರೋಮ್ಯಾಕ್ಸ್) ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಹುವಾಕಿನ್ (Huaqin) ಜತೆಗೆ ಜಂಟಿ ಉದ್ಯಮದ ಮೂಲಕ ವಿವೊಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಭಗವತಿ ಮತ್ತು ಹುವಾಕಿನ್ ನಡುವಿನ ಈ ಜಂಟಿ ಉದ್ಯಮವು ಭಾರತ ಸರ್ಕಾರದ ಅನುಮೋದನೆಗೆ ಕಾಯುತ್ತಿದೆ. ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗಾಗಿ ವಿಶ್ವದ ಅತಿದೊಡ್ಡ ಮೂಲ ವಿನ್ಯಾಸ ತಯಾರಕ ಕಂಪನಿಯಾಗಿದೆ ಹುವಾಕಿನ್.
ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಷೇರು ಖರೀದಿಸಿ ಪಾಲು ಹೆಚ್ಚಿಸಿಕೊಂಡ ಗೌತಮ್ ಅದಾನಿ
ಷೇರು ಪೇಟೆಯಲ್ಲಿ ಸತತ 3ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಹೊಸ ಗರಿಷ್ಠ ಮಟ್ಟ ಮುಟ್ಟಿದ ಸೂಚ್ಯಂಕ