ರೇಪ್​ ಕೇಸ್​ನಿಂದ ತೆಹಲ್ಕಾ ಮ್ಯಾಗಜಿನ್​ ಸಂಸ್ಥಾಪಕ ತರುಣ್​ ತೇಜ್​ಪಾಲ್​ ಖುಲಾಸೆ: ಗೋವಾ ನ್ಯಾಯಾಲಯ ಆದೇಶ

Tarun Tejpal
Published on

ಪಣಜಿ: ತೆಹಲ್ಕಾ ಮ್ಯಾಗಜಿನ್​ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ ತರುಣ್​ ತೇಜ್​ಪಾಲ್​ ವಿರುದ್ಧ ಕೇಳಿಬಂದಿದ್ದ ಅತ್ಯಾಚಾರ ಆರೋಪದಿಂದ ಗೋವಾ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ​

ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಗೋವಾ ಸೆಷನ್ಸ್ ಕೋರ್ಟ್ ಮೇ 21ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸದ್ಯ ತೇಜ್​ಪಾಲ್​ ಜಾಮೀನಿನ ಮೇಲೆ ಹೊರಗಿದ್ದು, ಖುಲಾಸೆ ಆದೇಶದಿಂದ ಖುಷಿಪಟ್ಟಿದ್ದಾರೆ.

2013ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್‌ನಲ್ಲಿ ನಡೆದ ಸಮ್ಮೇಳನದ ಸಮಯದಲ್ಲಿ ತಮ್ಮ ಮ್ಯಾಗಜಿನ್​ನ ಕಿರಿಯ ಸಹೋದ್ಯೋಗಿ ಮೇಲೆ ಲಿಫ್ಟ್​ನಲ್ಲಿ ಅತ್ಯಾಚಾರ ಎಸಗಿದ್ದ ಆರೋಪ ತೇಜ್​ಪಾಲ್​ ಮೇಲಿತ್ತು.

ತೇಜ್​ಪಾಲ್​ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ನ್ಯಾಯಾಲಯ ತೇಜ್​ಪಾಲ್​ರನ್ನು ಬಂಧಿಸುವಂತೆ ಆದೇಶಿಸಿತ್ತು. ಈ ಪ್ರಕರಣದ ವಿರುದ್ಧ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಆಗಸ್ಟ್ ನಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ತೇಜ್ ಪಾಲ್ ಅರ್ಜಿ ವಜಾಗೊಳಿಸಿ, ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ಗೋವಾ ಕೋರ್ಟ್ ಗೆ ಸೂಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net