VIDEO: ಹಂದಿಗಳು ಸಾರ್​ ಹಂದಿಗಳಿವು, ಕಲ್ಲು ತೂರಿದ್ರೆ ಸುಮ್ನೆ ಬಿಟ್ಟಾವೆ?

pig1
Published on

ಕೆಲವರಿಗೆ ಸುಮ್ನೆ ಪ್ರಾಣಿಗಳನ್ನು ಕೆಣಕುವ ಚಟ. ರಸ್ತೆಯ ಮೇಲೆ ಹೋಗುತ್ತಿರುವ ನಾಯಿಗೆ ಕಲ್ಲು ಹೊಡೆಯುವುದು, ಸುಮ್ಮನೆ ನಿಂತಿದ್ದ ಪ್ರಾಣಿಗಳಿಂದ ಕೋಲಿನಿಂದ ಬಡಿಯುವುದು ಹೀಗೆ ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವುದರಲ್ಲಿಯೇ ವಿಕೃತ ಸಂತೋಷ.

ದೊಡ್ಡವರನ್ನು ನೋಡಿ ಇದೇ ರೀತಿ ಮಕ್ಕಳು ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವ ಪ್ರವೃತ್ತಿಯನ್ನೂ ಅಲ್ಲಲ್ಲಿ ಕಾಣಬಹುದು. ಆದರೆ ಪಾಪ ಮಕ್ಕಳಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದೇ ತಿಳಿಯುವುದಿಲ್ಲ. ಆದರೆ ದೊಡ್ಡವರು? ಇದಕ್ಕೆ ವಿಕೃತಿ ಎನ್ನದೇ ಇನ್ನೇನು ಹೇಳಬೇಕು?

ಎಲ್ಲವೂ ಸರಿಯಾಗಿದ್ದರೆ ಸರಿ. ಆದರೆ ಗ್ರಹಚಾರ ಕೆಟ್ಟರೆ ಎಲ್ಲವೂ ಉಲ್ಟಾ ಆಗತ್ತೆ. ಇಂಥದ್ದೇ ವಿಕೃತಿ ಮೆರೆಯಲು ಹೋದ ಗುಂಪಿನ ವಿರುದ್ಧವೇ ಹಂದಿಯೊಂದು ತಿರುಗಿಬಿದ್ದಿರುವ ಘಟನೆ ನಡೆದಿದೆ.

ಒಂದಿಷ್ಟು ಜನರ ಗುಂಪು ಕೆರೆಯ ಸಮೀಪ ಹೋಗಿದೆ. ಅಲ್ಲೊಂದು ಹಂದಿ ತನ್ನಷ್ಟಕ್ಕೇ ತಾನು ನಿಂತಿದೆ. ಈ ಗುಂಪಿನಲ್ಲೊಬ್ಬ ಸುಮ್ಮನಿರಲಾರದೇ ಅದಕ್ಕೆ ಕಲ್ಲು ಹೊಡೆದಿದ್ದಾನೆ. ಒಂದು ಸಲ ಸಹಿಸಿಕೊಂಡ ಹಂದಿ ಸುಮ್ಮನೆ ಇದೆ. ಅದು ಸುಮ್ಮನೇ ಇದೆ ಎಂದು ಮತ್ತೊಮ್ಮೆ ಕಲ್ಲು ಹೊಡೆದಿದ್ದಾನೆ.

ಹಂದಿ ಸುಮ್ಮನೆ ಇರುತ್ತದೆಯೇ? ರೋಷಗೊಂಡು ತಿರುಗಿ ಅವನ ಮೇಲೆ ಎರಗಿ ಅವನನ್ನು ಕೆರೆಯೊಳಕ್ಕೆ ಎಸೆದಿದೆ. ಆತ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಇನ್ನೊಬ್ಬ ಇವನನ್ನು ಎತ್ತುವ ಬದಲು ಹಂದಿಗೆ ಮತ್ತೆ ಕಲ್ಲು ಎಸೆದಿದ್ದಾನೆ. ಅವರ ಮೇಲೂ ಹಂದಿ ಎರಗಿದೆ. ನಂತರ ಇಡೀ ಗುಂಪು ಬಂದು ಹಂದಿಯತ್ತ ಕಲ್ಲು ಹೊಡೆಯಲು ಶುರು ಮಾಡಿದೆ. ಹಂದಿ ಅವರ ಮೇಲೂ ಎರಗಿ ನಂತರ ದೂರ ತೆರಳಿದೆ.

ಕೆರೆಯಲ್ಲಿ ಬಿದ್ದವರು ಸತ್ತೆನೋ, ಬಿದ್ದೆನೋ, ಎದ್ದೆನೋ ಎಂದು ಮೇಲೇರಿ ಹೋಗಿದ್ದಾರೆ. ಇದನ್ನು ಅವರದ್ದೇ ಗುಂಪಿನ ಒಬ್ಬ ವ್ಯಕ್ತಿ ವೀಡಿಯೋ ಮಾಡಿದ್ದಾನೆ.

ಇದನ್ನು ಪಾಕಿಸ್ತಾನದ ಲೇಖಕ, ಇಸ್ಲಾಂನೊಳಗಿನ ಬಂಡಾಯಕಾರ ಎಂದೇ ಪ್ರಸಿದ್ಧಿಗೊಂಡಿರುವ ತಾರೇಖ್​ ಫತಾ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ ಕಲ್ಲು ಹೊಡೆಯುತ್ತಿದ್ದ ಗುಂಪಿನ ಉರ್ದು ಭಾಷೆಯನ್ನು ಗಮನಿಸಿ, ಇದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಇರಬಹುದು ಎಂದು ಊಹಿಸಲಾಗಿದೆ.

ಈ ಟ್ವೀಟ್​ ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಶೇರ್​ ಆಗಿದ್ದು, 10.6 ಲಕ್ಷ ಮಂದಿ ಲೈಕ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net