

ತೆಲುಗು ಚಿತ್ರ ‘ಜುಮ್ಮಂದಿ ನಾದಂ’ ಮೂಲಕ ಚಿತ್ರರಂಗಕ್ಕೆ ಬಂದ ತಾಪ್ಸಿ ಪನ್ನು ಮೊದಲು ದಕ್ಷಿಣದ ಸಿನಿಮಾಗಳಲ್ಲಿ ಹೆಸರು ಮಾಡಿ, ಇದೀಗ ಬಾಲಿವುಡ್ನಲ್ಲಿ ಬಿಜಿ ನಟಿ ಎಂದೆನಿಸಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗಿನ ನಡೆದುಬಂದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ ಎಂದು ತಾಪ್ಸಿ ಇದೀಗ ಹೇಳಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಾಪ್ಸಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತಂತೆ. ಒಬ್ಬ ಹೀರೋ ಹೆಂಡತಿಗೆ ತಾನು ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಒಂದು ಚಿತ್ರದಿಂದ ಅವಕಾಶ ಕಳೆದುಕೊಳ್ಳಬೇಕಾಯಿತಂತೆ. ಇನ್ನೊಂದು ಚಿತ್ರದಲ್ಲಿ ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ, ಆ ಚಿತ್ರದ ಹೀರೋಗೆ ಒಂದು ಸಂಭಾಷಣೆ ಸರಿಬರಲಿಲ್ಲ ಎಂಬ ಕಾರಣಕ್ಕೆ ಸಂಭಾಷಣೆಯನ್ನೇ ಬದಲಾಯಿಸುವುದಕ್ಕೆ ಸೂಚಿಸಲಾಯಿತಂತೆ. ತಾಪ್ಸಿ ಆ ಸಂಭಾಷಣೆ ಬೇರೆ ರೀತಿ ಹೇಳುವುದಕ್ಕೆ ಒಪ್ಪದಿದ್ದಾಗ, ಒಬ್ಬ ಡಬ್ಬಿಂಗ್ ಕಲಾವಿದೆಯಿಂದ ಬೇರೆ ಸಂಭಾಷಣೆಯನ್ನು ಹೇಳಿಸಲಾಯಿತಂತೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಚಿತ್ರದಲ್ಲಿ, ಹೀರೋನ ಪರಿಚಯದ ದೃಶ್ಯಕ್ಕಿಂತ ತನ್ನ ಪರಿಚಯದ ದೃಶ್ಯ ಬಹಳ ಚೆನ್ನಾಗಿದ್ದರಿಂದ ಆ ದೃಶ್ಯವನ್ನು ಪಟ್ಟುಹಿಡಿದು ಬದಲಾಯಿಸಲಾಯಿತಂತೆ.
ಹೀಗೆ ತನ್ನ ಚಿತ್ರಜೀವನದಲ್ಲಿ ಸಾಕಷ್ಟು ಒತ್ತಡ ಮತ್ತು ಅವಮಾನಗಳನ್ನು ಅನುಭವಿಸಿದರೂ, ತಾಳ್ಮೆಯಿಂದ ಇಲ್ಲಿಯವರೆಗೂ ನಡೆದು ಬಂದಿದ್ದಾಗಿ ತಾಪ್ಸಿ ಹೇಳಿಕೊಳ್ಳುವುದಷ್ಟೇ ಅಲ್ಲ, ತಮ್ಮ ವೃತ್ತಿಜೀವನದ ಬಗ್ಗೆ ತಮಗೆ ಖುಷಿಯಿದೆ ಎಂದು ಹೇಳಿಕೊಳ್ಳುತ್ತಾರೆ. -ಏಜೆನ್ಸೀಸ್