

ನವದೆಹಲಿ: ಕರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದ್ದು, ಒಟ್ಟಾರೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಇದು ಸಂಸತ್ ಅಧಿವೇಶನವನ್ನೂ ಬಿಡುವ ಲಕ್ಷಣವಿಲ್ಲ. ಈ ಸಲದ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇದೆಯೇ ಎಂಬ ಸಂದೇಹ ಉಂಟಾಗಿದೆ. ಸಾಮಾನ್ಯವಾಗಿ ಇಷ್ಟು ಹೊತ್ತಿಗಾಗಲೇ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆ ನಡೆಯಬೇಕಾಗಿತ್ತು. ಆದರೆ, ಇದುವರೆಗೂ ಚಳಿಗಾಲದ ಅಧಿವೇಶನದ ಬಗ್ಗೆ ಕೇಂದ್ರ ಸರ್ಕಾರವೂ ಚಕಾರವೆತ್ತಿಲ್ಲ.
ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗುವ ಅಧಿವೇಶನ ಮೂರು ವಾರ ಕಾಲ ನಡೆಯುತ್ತಿತ್ತು. ದೆಹಲಿಯಲ್ಲಿ ಕರೊನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿರುವ ಕಾರಣ ಚಳಿಗಾಲದ ಅಧಿವೇಶನವನ್ನು ಕರೆಯದಿರಲು ಹಾಗೂ ನೇರವಾಗಿ ಜನವರಿ ಅಂತ್ಯಕ್ಕೆ ಬಜೆಟ್ ಅಧಿವೇಶನಕ್ಕೆ ಹೋಗಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂಬ ಮಾತು ಕೇಳಿಬಂದಿದೆ.
ಸಂಸತ್ ಅಧಿವೇಶನದ ಇತಿಹಾಸದ ಪುಟಗಳನ್ನು ತಿರುವಿದರೆ, 1975, 1979 ಹಾಗೂ 1984ರಲ್ಲಿ ಚಳಿಗಾಲದ ಅಧಿವೇಶನ ನಡೆದಿಲ್ಲ ಎಂಬ ಅಂಶ ಗಮನಸೆಳೆಯುತ್ತದೆ. ಸಂಸತ್ನಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದರಿಂದ ಮಾರ್ಚ್ನಲ್ಲಿನ ಬಜೆಟ್ ಅಧಿವೇಶನವನ್ನು ಹಾಗೂ ಮುಂಗಾರು ಅಧಿವೇಶನವನ್ನು ಅವಧಿಗೂ ಮೊದಲೇ ಮೊಟಕುಗೊಳಿಸಲಾಗಿತ್ತು. (ಏಜೆನ್ಸೀಸ್)