

ಬೆಂಗಳೂರು: ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ ವಾಸಕ್ಕೆ ಸಿದ್ಧ ಇರುವ ಪ್ಲ್ಯಾಟ್ ಅನ್ನು ಬಾಡಿಗೆಗೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಸೀರೆ ಸಗಟು ವ್ಯಾಪಾರಿಗಳನ್ನು ಮನೆಗೆ ಕರೆಸಿಕೊಂಡು ಮಾಡಬಾರದ್ದನ್ನು ಮಾಡಿ ಎಸ್ಕೇಪ್ ಆಗುತ್ತಿದ್ದಳು. ಇದೀಗ ಕೊನೆಗೂ ಸಂಪಿಗೇಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇಂದಿರಾನಗರದ ಎಚ್.ಶಶಿಕಲಾ (45) ಬಂಧಿತೆ. ಪತಿಯಿಂದ ದೂರವಾಗಿದ್ದು, ಇಬ್ಬರು ಚಿಕ್ಕ ಮಕ್ಕಳನ್ನು ಅಕ್ಕನ ಮನೆಯಲ್ಲಿ ಬಿಟ್ಟಿದ್ದಾಳೆ. ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಈಕೆ ಖತರ್ನಾಕ್ ಐಡಿಯಾ ಕೇಳಿದ್ರೆ ಸೀರೆ ವ್ಯಾಪಾರಿಗಳು ಬೆಚ್ಚಿಬೀಳ್ತಾರೆ.
ಆಂಧ್ರಪ್ರದೇಶ ಮೂಲದ ಶಶಿಕಲಾ, ಸೀರೆ ಸಗಟು ವ್ಯಾಪಾರಿಗಳಿಗೆ ಕರೆ ಮಾಡಿ ನ್ಯಾಯಾಧೀಶರ ಮನೆಯಲ್ಲಿ ಮದುವೆ ಸಮಾರಂಭ ಇದೆ. 5 ಸಾವಿರದಿಂದ 5 ಲಕ್ಷ ರೂ. ಬೆಲೆ ಬಾಳುವ 20 ಲಕ್ಷ ರೂ. ಮೌಲ್ಯದ ಸೀರೆಗಳನ್ನು ತರುವಂತೆ ಸೂಚಿಸುತ್ತಿದ್ದಳು. ಸೀರೆಗಳನ್ನು ಆಯ್ಕೆ ಮಾಡಿ ನ್ಯಾಯಾಧೀಶರ ಕುಟುಂಬ ಸದಸ್ಯರಿಗೆ ತೋರಿಸಿ ಒಪ್ಪಿಗೆ ಪಡೆದು ಹಣ ಪಾವತಿ ಮಾಡುತ್ತೇನೆ ಎಂದು ಹೇಳಿ ಚೆಕ್ ಕೊಡುತ್ತಿದ್ದಳು.
ಅ.29ರಂದು ಯುನಿಷೇರ್ ಪನಮೆರಾ ಅಪಾರ್ಟ್ಮೆಂಟ್ನಲ್ಲಿನ ಪ್ಲ್ಯಾಟ್ಗೆ ಆಂಧ್ರದ ಪೆಂಡಂ ಟೆಕ್ಸ್ಟೈಲ್ಸ್ ಮಾಲೀಕ ಪೆಂಡವ್ ಎಂಬಾತನನ್ನು ಕರೆಸಿಕೊಂಡು ಸೀರೆ ಪಡೆದು ನ್ಯಾಯಾಧೀಶರಿಗೆ ತೋರಿಸಿ ಹಣ ತಂದು ಕೊಡುವುದಾಗಿ ಹೇಳಿ ಸೀರೆ ಸಮೇತ ಪರಾರಿಯಾಗಿದ್ದಳು.
ವ್ಯಾಪಾರಿ ನೀಡಿದ ದೂರಿನ ಮೇರೆಗೆ ಪ್ಲ್ಯಾಟ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಮೊಬೈಲ್ ಕರೆಗಳ ಜಾಡು ಹಿಡಿದು ಎಫ್ಐಆರ್ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಬಿ. ಮಲ್ಲಿಕಾರ್ಜುನ್ ಮತ್ತವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ 120 ಸೀರೆಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ದೇವನಹಳ್ಳಿ, ಬಾಣಸವಾಡಿ, ಬೈಯಪ್ಪನಹಳ್ಳಿ ಠಾಣೆಗಳಲ್ಲಿ ಈಕೆ ವಿರುದ್ಧ ದೂರು ದಾಖಲಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಪ್ ಮತ್ತು ವೆಬ್ಸೈಟ್ ಮೂಲಕ ಪ್ಲ್ಯಾಟ್ ಬಾಡಿಗೆ ಪಡೆದು ಮಾಲೀಕರನ್ನು ಭೇಟಿ ಮಾಡುತ್ತಿದ್ದಳು. ಸುಳ್ಳು ವಿಳಾಸ ಕೊಟ್ಟು ಅವರು ಹೇಳಿದ ಬಾಡಿಗೆ ಹಣಕ್ಕೆ ಒಪ್ಪಿಕೊಂಡು ಮುಂಗಡ ಹಣಕ್ಕೆ ಚೆಕ್ ಕೊಟ್ಟು ಮುಂದಿನ ವಾರ ಬ್ಯಾಂಕ್ಗೆ ಜಮೆ ಮಾಡಿಕೊಳ್ಳುವಂತೆ ತಿಳಿಸಿ ಕೀ ಪಡೆಯುತ್ತಿದ್ದಳು. ಕದ್ದ ಸೀರೆಗಳನ್ನು ತಮಿಳುನಾಡು, ಆಂಧ್ರ ಮತ್ತು ಚಿಕ್ಕಪೇಟೆಯ ಅಂಗಡಿಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದಳು. ಈ ಅಂಗಡಿ ಮಾಲೀಕರಿಗೂ ವಿಳಾಸ ಕೊಡುತ್ತಿರಲಿಲ್ಲ.