CVe Shanmugam | ಮತಕ್ಕಾಗಿ ಡಿಎಂಕೆ ಉಚಿತ ಹೆಂಡತಿ ಯೋಜನೆ ತರಬಹುದು: ವಿವಾದಾತ್ಮಕ ಹೇಳಿಕೆ ನೀಡಿದ ಎಐಎಡಿಎಂಕೆ ಸಂಸದ!

C v Shanmugam
Published on

Chennai: ಎಐಎಡಿಎಂಕೆ ರಾಜ್ಯಸಭಾ ಸಂಸದ ಸಿವಿಇ ಷಣ್ಮುಗಂ(CVe Shanmugam) ಮಹಿಳೆಯರನ್ನು ಸರ್ಕಾರದ ಉಚಿತ ಕೊಡುಗೆಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿದೆ.

ಎಐಎಡಿಎಂಕೆ ಬೂತ್ ಸಮಿತಿ ತರಬೇತಿ ಸಭೆಯಲ್ಲಿ ಮಾತನಾಡಿದ ಷಣ್ಮುಗಂ, ಮುಂಬರುವ ಚುನಾವಣೆಗಳಿಗೆ ಅನೇಕ ಉಚಿತ ಘೋಷಣೆಗಳು ಹೊರ ಬೀಳಲಿವೆ. ಡಿಎಂಕೆ ಸರ್ಕಾರ, ಮಿಕ್ಸರ್, ಗ್ರೈಂಡರ್, ಮೇಕೆ, ಹಸುಗಳನ್ನು ಉಚಿತವಾಗಿ ನೀಡುತ್ತಾರೆ, ಅದಷ್ಟೆ ಏಕೆ, ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಹೆಂಡತಿಯನ್ನು ಸಹ ನೀಡಬಹುದು ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕರುಣಾನಿಧಿಯವರ ಮಗನಾಗಿರುವುದರಿಂದ ಈ ರೀತಿಯ ಭರವಸೆಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಡಿಎಂಕೆ ಸಚಿವೆ ತಿರುಮಿಗು ಗೀತಾ ಜೀವನ್ ತಮ್ಮ ಎಕ್ಸ್​ ಖಾತೆಯ ಮೂಲಕ ಹೇಳಿಕೆಯನ್ನು ಖಂಡಿಸಿದ್ದು, ಷಣ್ಮುಗಂ ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ, ಅವರ ಹೇಳಿಕೆಗಳು ಎಐಎಡಿಎಂಕೆ ಮಹಿಳೆಯರ ಬಗ್ಗೆ ಹೊಂದಿರುವ ವಿಕೃತ ಮನೋಭಾವ ಮತ್ತು ದುರುದ್ದೇಶವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ.

ಟೀಕಿಸಲು ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಕ್ಕಾಗಿ ರಾಜ್ಯಸಭಾ ಸದಸ್ಯರನ್ನು ಟೀಕಿಸಿದ ಗೀತಾ, ಜಯಲಲಿತಾ ಜೀವಂತವಾಗಿದ್ದರೆ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೇ...? ಈ ಹೇಳಿಕೆಯ ಕುರಿತಾಗಿ ಎಡಪ್ಪಾಡಿ ಪಳನಿಸ್ವಾಮಿ ಮೌನವನ್ನು ಸಚಿವೆ ಪ್ರಶ್ನಿಸಿದರು. ಈ ಹಿಂದೆ ಪಳನಿಸ್ವಾಮಿ ವಿಡಿಯಾಲ್ ಪಯಣಂ ಬಸ್‌ಗಳನ್ನು "ಲಿಪ್‌ಸ್ಟಿಕ್ ಲೇಪಿತ ಬಸ್‌ಗಳು" ಎಂದು ಕರೆದಿದ್ದು, ನಟಿ ಖುಷ್ಬು ಮಹಿಳಾ ಹಕ್ಕುಗಳ ಯೋಜನೆಯ ಮೊತ್ತವನ್ನು "ಭಿಕ್ಷೆ ಬೇಡುವುದು" ಎಂದು ಕರೆದಿದ್ದು ಮತ್ತು ಪಿಎಂಕೆಯ ಸೌಮ್ಯ ಅನ್ಬುಮಣಿ ಮಹಿಳೆಯರಿಗೆ ನೀಡಲಾಗುವ 1,000 ರೂ. ಪರಿಹಾರ ಮೊತ್ತವನ್ನು ಅಪಹಾಸ್ಯ ಮಾಡಿರುವುದು ಸೇರಿದಂತೆ ಎಐಎಡಿಎಂಕೆ ನಾಯಕರು ಮಹಿಳಾ ಯೋಜನೆಗಳನ್ನು ಅವಹೇಳನ ಮಾಡಿದ ಹಿಂದಿನ ನಿದರ್ಶನಗಳನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣ ಭಾಗವಹಿಸುವಿಕೆ ಮತ್ತು ಉದ್ಯೋಗಾವಕಾಶಗಳನ್ನು ಸುಧಾರಿಸುವ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಡಿಎಂಕೆ ಹೇಳಿಕೆ ಒತ್ತಿ ಹೇಳಿದೆ. ಇಂತಹ ಅಭಿವೃದ್ಧಿ ಪರ ಯೋಜನೆಗಳು ಎಐಎಡಿಎಂಕೆಗೆ ಇಷ್ಟವಿಲ್ಲ, ಆದ್ದರಿಂದಲೇ ಆ ಪಕ್ಷದ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದರು.

ಡಿಎಂಕೆ ಸರ್ಕಾರದ ಮಹಿಳಾ ಪರ ಯೋಜನೆಗಳು..

ಇದೇ ವೇಳೆ ಮಹಿಳಾ ಸಬಲೀಕರಣದ ಹಲವಾರು ಡಿಎಂಕೆ ಯೋಜನೆಗಳನ್ನು ಉಲ್ಲೇಖಿಸಿದ ಸಚಿವೆ ಗೀತಾ, ವಿಡಿಯಾಲ್ ಪಯಣಂ, ಕಲೈಗ್ನಾರ್ ಮಹಿಳಾ ಹಕ್ಕುಗಳ ಯೋಜನೆ, ಪುದುಮೈ ಪೆನ್ ಯೋಜನೆ, ದುಡಿಯುವ ಮಹಿಳೆಯರಿಗಾಗಿ ತೋಝಿ ಹಾಸ್ಟೆಲ್‌ಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಮಿತಿಗಳನ್ನು ಹೆಚ್ಚಿಸುವ ಮತ್ತು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ಸೇರಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net