ಚೆನ್ನೈ: ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ಶನಿವಾರ (ಮಾರ್ಚ್ 30) ನಿಧನರಾಗಿದ್ದಾರೆ. ಮೃತರಿಗೆ 48 ವರ್ಷ ವಯಸ್ಸಾಗಿತ್ತು.
ಮಾರ್ಚ್ 29ರಂದು ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಕಾರಣ ಶನಿವಾರ (ಮಾರ್ಚ್ 30) ಅವರು ಕೊನೆಯುಸಿರು ಎಳೆದಿದ್ದಾರೆ. ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಸಹೋದರಿ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ Zomato ಐಡಿ ಬ್ಲಾಕ್; ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ
ನಟ ಡೇನಿಯಲ್ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಡೇನಿಯಲ್ ಬಾಲಾಜಿ ಕನ್ನಡದಲ್ಲಿ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್ವರ್ಲ್ಡ್ ಹಾಗೂ ಡವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರಿಯರಿಗೆ ಚಿರಪರಿಚಿತರಾಗಿದ್ದರು.
ತಮಿಳು ಸೀರಿಯಲ್ ಚಿತ್ತಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಡ್ಯಾನಿಯಲ್ ಬಾಲಾಜಿ ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದರು. ಸಿನಿಮಾ ರಂಗ ಹೊರತುಪಡಿಸಿ ಧಾರ್ಮಿಕ ಕಾರ್ಯಗಳಲ್ಲೂ ಡೇನಿಯಲ್ ಬಾಲಾಜಿ ಸಕ್ರಿಯರಾಗಿದ್ದು, ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.