

ಬೆಂಗಳೂರು: 'ಮಿಲ್ಕಿ ಬ್ಯೂಟಿ' ಎಂದೇ ಜನಪ್ರಿಯರಾಗಿರುವ ತಮನ್ನಾ ಭಾಟಿಯಾ ಮತ್ತು ವಿಜಯ್ ಸೇತುಪತಿ ಇಬ್ಬರೂ ಇತ್ತೀಚೆಗೆ ಜತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು, ಅವರಿಬ್ಬರೂ ಯಾವುದಾದರೂ ಸಿನಿಮಾದಲ್ಲಿ ಜತೆಯಾಗಿ ನಟಿಸುತ್ತಿದ್ದಾರಾ? ಎಂಬ ಪ್ರಶ್ನೆ ಅವರಿಬ್ಬರ ಅಭಿಮಾನಿಗಳಲ್ಲಿ ಮೂಡಿದೆ.
ವಿಜಯ್ ಸೇತುಪತಿ ಮತ್ತು ತಮನ್ನಾ ಭಾಟಿಯಾ ಇಬ್ಬರೂ ಜತೆಯಾಗಿ ನಟಿಸುತ್ತಿರುವುದು ಹೊಸದೇನಲ್ಲ. ಈಗಾಗಲೇ, ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ 'ಧರ್ಮ ದುರೈ' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದಾರೆ. ಈಗ ಅವರಿಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದು, 'ಮಾಸ್ಟರ್ ಚೆಫ್' ಕಾರ್ಯಕ್ರಮದ ಪ್ರೋಮೋ ಶೂಟಿಂಗ್ನಲ್ಲಿ.
ವಿದೇಶದಲ್ಲಿ ಬಹಳ ಜನಪ್ರಿಯವಾಗಿರುವ 'ಮಾಸ್ಟರ್ ಚೆಫ್' ಕಾರ್ಯಕ್ರಮವು, ಈಗ ಭಾರತದಲ್ಲೂ 'ಮಾಸ್ಟರ್ ಚೆಫ್ ಇಂಡಿಯಾ' ಹೆಸರಿನಲ್ಲಿ ಪ್ರಸಾರವಾಗಲಿದೆ. ಈ ಪೈಕಿ, ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ತೆಲುಗು ಅವತರಣಿಕೆಯನ್ನು ತಮನ್ನಾ ನಡೆಸಿಕೊಟ್ಟರೆ, ಸನ್ ಟಿವಿಯಲ್ಲಿ ನಡೆಸಿಕೊಡುವ ತಮಿಳು ಅವತರಣಿಕೆಯನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ಈ ಕಾರ್ಯಕ್ರಮದ ಪ್ರೋಮೋ ಶೂಟ್ ಆಗಿದ್ದು, ಈ ವೇಳೆ ತಮನ್ನಾ ಹಾಗೂ ವಿಜಯ್ ಸೇತುಪತಿ ಜತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಇದನ್ನೂ ಓದಿ: ಅದಿತಿ ಆಗಮನ…; 5ಡಿ ಮೂಲಕ ಶೂಟಿಂಗ್ಗೆ ಎಂಟ್ರಿ
ಈ ಕಾರ್ಯಕ್ರಮವು ಕನ್ನಡ ಹಾಗೂ ಮಲಯಾಳಂನಲ್ಲೂ ಪ್ರಸಾರವಾಗಲಿದ್ದು, ಕನ್ನಡ ಅವತರಣಿಕೆಯನ್ನು ಸುದೀಪ್ ನಡೆಸಿಕೊಟ್ಟರೆ, ಮಲಯಾಳಂ ಅವತರಣಿಕೆಯ ನಿರೂಪಣೆಯ ಜವಾಬ್ದಾರಿಯನ್ನು ಪೃಥ್ವಿರಾಜ್ ಸುಕುಮಾರನ್ ಹೊತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ 15 ಸ್ಪರ್ಧಿಗಳಿದ್ದು, ಮೂವರು ಚೆಫ್ಗಳು ತೀರ್ಪುಗಾರರಾಗಿರಲಿದ್ದು, ಈ ಕಾರ್ಯಾಕ್ರಮವು ವಾರಾಂತ್ಯಗಳಲ್ಲಿ ಪ್ರಸಾರವಾಗಲಿದೆ.