ಸುಶಾಂತ್ ಆತ್ಮಹತ್ಯೆ: ಟ್ಯಾಲೆಂಟ್ ಮ್ಯಾನೇಜರ್ ರೇಶ್ಮಾ ಶೆಟ್ಟಿ ವಿಚಾರಣೆ

Final - Sushant
Published on

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು, ಈ 14ಕ್ಕೆ ಒಂದು ತಿಂಗಳಾಗುತ್ತಿದೆ. ಈ ಮಧ್ಯೆ ಅವರ ಸಾವಿಗೆ ಕಾರಣವೇನಿರಬಹುದು ಎಂದು ಮುಂಬೈ ಪೊಲೀಸ್ ತನಿಖೆ ಮಾಡುತ್ತಿದೆ.

ಈ ಸಂಬಂಧ ಈಗಾಗಲೇ ಬಾಲಿವುಡ್‍ನ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದೀಗ ಬಾಲಿವುಡ್‍ನ ಖ್ಯಾತ ಟ್ಯಾಲೆಂಟ್ ಮ್ಯಾನೇಜರ್ ಆಗಿರುವ ರೇಶ್ಮಾ ಶೆಟ್ಟಿ ಅವರನ್ನು ಸಹ ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಶುಕ್ರವಾರ ಮುಂಬೈ ಪೊಲೀಸರು ರೇಶ್ಮಾ ಶೆಟ್ಟಿ ಅವರನ್ನು ಕರೆಸಿಕೊಂಡು ಸುಮಾರು ಐದು ತಾಸುಗಳ ಕಾಲ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರೇಶ್ಮಾ ಹಲವು ಪ್ರಮುಖ ವಿಚಾರಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಆಲಿಯಾ ಭಟ್ ಮುಂತಾದವರಿಗೆ ಕೆಲಸ ಮಾಡಿದ್ದ ರೇಶ್ಮಾ, ಅವರೆಲ್ಲಾ ದೊಡ್ಡ ದೊಡ್ಡ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಮುಂಬೈನಲ್ಲಿ ಮ್ಯಾಟ್ರಿಕ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ರೇಶ್ಮಾ, ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಕ್ಯಾಂಪೇನ್‍ನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಅಷ್ಟೇ ಅಲ್ಲ, `ಬಿಗ್ ಬಾಸ್' ಮುಂತಾದ ಕಾರ್ಯಕ್ರಮಗಳು ಸಲ್ಮಾನ್‍ಗೆ ಸಿಗುವುದಕ್ಕೆ ಸಾಕಷ್ಟು ಕೆಲಸ ಮಾಡಿದ್ದರು.

2018ರಲ್ಲಿ ಸಲ್ಮಾನ್ ಮತ್ತು ರೇಶ್ಮಾ ಮಧ್ಯೆ ಸಮಸ್ಯೆ ಎದುರಾಗಿ ಇಬ್ಬರೂ ದೂರವಾದರು. ಆ ನಂತರ ಅಕ್ಷಯ್ ಕುಮಾರ್, ಆಲಿಯಾ ಭಟ್, ಕತ್ರೀನಾ ಕೈಫ್ ಮುಂತಾದವರ ಜಾಹೀರಾತು ಮತ್ತು ಇತರೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ ರೇಶ್ಮಾ. ಜಾಹೀರಾತಿನ ವಿಷಯವಾಗಿ ಸುಶಾಂತ್ ಮತ್ತು ರೇಶ್ಮಾ ನಡುವೆ ಏನಾದರೂ ಮಾತುಕಥೆಯಾಗಿತ್ತಾ ಎಂಬ ವಿಷಯದಲ್ಲಿ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದು, ಅದೇ ಸಂಬಂಧ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net