ಅನಿತಾ ಜೂಟಾಟ!

Anitha Bhta
Published on

ಬೆಂಗಳೂರು: ಲಾಕ್​ಡೌನ್ ನಡುವೆಯೇ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಸಿನಿಮಾ ಶೂಟಿಂಗ್ ಮಾಡಿಕೊಳ್ಳಬಹುದು ಎಂಬ ಆದೇಶದ ಮೇರೆಗೆ ಕೆಲವು ಚಿತ್ರತಂಡಗಳು ಚಿತ್ರೀಕರಣಕ್ಕೆ ಚಾಲನೆ ನೀಡಿವೆ. ಆ ಪೈಕಿ ನಟಿ ಅನಿತಾ ಭಟ್ ಸಹ ಹೊಸ ಸಿನಿಮಾ ಒಪ್ಪಿಕೊಂಡು ಬಹುದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ.

ಆ ಅನುಭವವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ಅಂದಹಾಗೆ, ಅನಿತಾ ಭಟ್ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ‘ಜೂಟಾಟ’. ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ನಾಗೇಶ್ ಕಾರ್ತಿ, ‘ಜೂಟಾಟ’ ಮೂಲಕ ಚೊಚ್ಚಲ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಹಾಸ್ಯಭರಿತ ಮತ್ತು ಹಾರರ್ ಶೈಲಿಯ ಸಿನಿಮಾ ಇದಾಗಿದ್ದು, ಅನಿತಾ ಮುಖ್ಯಭೂಮಿಕೆಯಲ್ಲಿ ನಟಿಸಿದರೆ, ಗಿರಿ, ಅಶೋಕ್, ಮನು ಅವರಿಗೆ ಸಾಥ್ ನೀಡಿದ್ದಾರೆ. ‘ಇದೊಂದು ಪೂರ್ಣ ಪ್ರಮಾಣದ ಕಾಮಿಡಿ ಸಿನಿಮಾ. ಅಲ್ಲಲ್ಲಿ ಒಂದಷ್ಟು ಹಾರರ್ ಅಂಶಗಳನ್ನೂ ಕಾಣಬಹುದು. ಈ ಚಿತ್ರದಲ್ಲಿ ನಾನು ವೇಶ್ಯೆ ಪಾತ್ರ ಮಾಡುತ್ತಿದ್ದು, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಕರೊನಾ ಲಾಕ್​ಡೌನ್ ಭಯದ ನಡುವೆಯೇ ಶೂಟಿಂಗ್ ಆರಂಭಿಸಿದ್ದೇವೆ’ ಎನ್ನುವ ಅನಿತಾ, ‘ಶೂಟಿಂಗ್ ಸೆಟ್​ನಲ್ಲಿ 20 ಜನರಿಗಷ್ಟೇ ಅವಕಾಶ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಯೇ ಶೂಟಿಂಗ್ ಮಾಡಲಾಗುತ್ತಿದೆ. ನಿತ್ಯ 3 ಬಾರಿ ದೇಹದ ಉಷ್ಣತೆ ಪರೀಕ್ಷೆ, ಗ್ಲೌಸ್, ಮಾಸ್ಕ್​ಗಳ ಬಳಕೆ, ಸಾಮಾಜಿಕ ಅಂತರವನ್ನೂ ಕಡ್ಡಾಯವಾಗಿ ಪಾಲಿಸುತ್ತಿದ್ದೇವೆ’ ಎನ್ನುತ್ತಾರೆ.

ಅಂದಹಾಗೆ, ಈ ಹಿಂದೆ ಧ್ಯಾನ್ ಅಭಿನಯದಲ್ಲಿ ‘ಜೂಟಾಟ’ ಹೆಸರಿನ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದೇ ಶೀರ್ಷಿಕೆಯನ್ನು ಬಳಸಿಕೊಂಡು ನಾಗೇಶ್ ಕಾರ್ತಿ ಸಿನಿಮಾ ಮಾಡುತ್ತಿದ್ದಾರೆ. ಸಿ.ಎಂ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಚಿತ್ರ ನಿರ್ವಣವಾಗುತ್ತಿದೆ. ಸುನೀತ್ ಹಲಗೇರಿ ಛಾಯಾ ಗ್ರಹಣ, ಪ್ರದ್ಯೋತ್ತಮ್ ಸಂಗೀತ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net