ವಿಕಾಸ್ ದುಬೆ ಪಾತ್ರ ಮಾಡ್ತಾರಾ ಮನೋಜ್? ಏನಿದು ಸುದ್ದಿ?

Final - Manoj
Published on

ಶುಕ್ರವಾರ ಬೆಳಿಗ್ಗೆ ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಉತ್ತರ ಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿ ಸಾಯಿಸಿದ್ದಾರೆ. ಈ ಎನ್‍ಕೌಂಟರ್ ಬಗ್ಗೆ ಬೆಳಿಗ್ಗೆಯಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ವಿಕಾಸ್ ದುಬೆ ಕುರಿತಾಗಿ ಒಂದು ಚಿತ್ರ ತಯಾರಾಗುತ್ತಿದೆ ಎಂಬ ಸುದ್ದಿಯೊಂದು ಬಾಲಿವುಡ್‍ನಲ್ಲಿ ಬೆಳಿಗ್ಗೆಯಿಂದ ಕೇಳಿ ಬರುತ್ತಿದೆ.

ಹೌದು, ಕಳೆದ ವಾರ ಎಂಟು ಪೊಲೀಸರನ್ನು ಅಮಾನುಷವಾಗಿ ಕೊಂದ ಪಾತಕಿ ವಿಕಾಸ್ ದುಬೆ ಕುರಿತಾಗಿ ಬಾಲಿವುಡ್‍ನಲ್ಲಿ ಒಂದು ಚಿತ್ರ ಬರುತ್ತಿದೆಯಂತೆ. ಸಂದೀಪ್ ಕುಮಾರ್ ಎನ್ನುವವರು ತಾವು ವಿಕಾಸ್ ಕುರಿತು ಚಿತ್ರ ಮಾಡುತ್ತಿರುವುದಾಗಿಯೂ, ಮನೋಜ್ ಬಾಜ್ಪೇಯಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಎಲ್ಲಾ ಕಡೆ ಹೇಳಿಕೊಂಡು ಓಡಾಡುತ್ತಿದ್ದಾರೆ.

ಮನೋಜ್ ಜತೆಗೆ ಈಗಾಗಲೇ ಚಿತ್ರದ ಬಗ್ಗೆ ಮಾತನಾಡಿರುವುದಾಗಿ ಹೇಳಿರುವ ಅವರು, ಸದ್ಯದಲ್ಲೇ ಅಗ್ರೀಮೆಂಟ್ ಆಗಲಿದೆ ಎಂದು ಸಹ ಹೇಳಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಮನೋಜ್ ಅವರನ್ನು ಭೇಟಿ ಮಾಡಿ ಚಿತ್ರಕಥೆ ಮತ್ತು ಪಾತ್ರದ ಬಗ್ಗೆ ರೀಡಿಂಗ್ ಕೊಟ್ಟು ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಯಾವಾಗ ವಿಕಾಸ್ ದುಬೆ ಕುರಿತಾಗಿ ಒಂದು ಚಿತ್ರ ಆಗುತ್ತಿದೆ ಮತ್ತು ಅದರಲ್ಲಿ ತಾನು ಕುಖ್ಯಾತನ ಪಾತ್ರ ಮಾಡುತ್ತಿದ್ದೀನಿ ಎಂದು ಸುದ್ದಿಯಾಯಿತೋ, ಮನೋಜ್ ಸೀದಾ ಟ್ವಿಟರ್‍ನಲ್ಲಿ ಅವೆಲ್ಲಾ ರಾಂಗ್ ನ್ಯೂಸ್ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಆ ರೀತಿಯ ಯಾವುದೇ ಚಿತ್ರ ಅಥವಾ ಪಾತ್ರವನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net