ಅನುರಾಗ್​ ಕಶ್ಯಪ್​ ದೊಡ್ಡ ಸ್ರ್ರೀವಾದಿ ಎಂದ ತಾಪ್ಸಿ ... ಯಾಕೆ?

Anurag - Taapsee
Published on

ಮುಂಬೈ: ಬಾಲಿವುಡ್​ ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ಪಾಯಲ್​ ಘೋಶ್​ ಮೀಟೂ ಆರೋಪ ಹೊರಿಸಿರುವುದು ಗೊತ್ತೇ ಇದೆ. ಹಿಂದೊಮ್ಮೆ ಅನುರಾಗ್ ಕಶ್ಯಪ್​ ಅವರು ತಮ್ಮ ಜತೆಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಪಾಯಲ್​ ಘೋಶ್​ ಇತ್ತೀಚೆಗೆ ಹೇಳಿಕೊಂಡಿದ್ದರು.

ಈ ವಿಷಯ ಸುದ್ದಿಯಾಗುತ್ತಿದ್ದಂತೆಯೇ ಅವರ ಪರವಾಗಿ ನಿಂತ ಕಂಗನಾ, ಅನುರಾಗ್​ ಕಶ್ಯಪ್​ ಅವರನ್ನು ಹಿಗ್ಗಾಮುಗ್ಗಾ ಬೈದಿದ್ದರು. ಹೀಗಿರುವಾಗ ನಟಿ ತಾಪ್ಸಿ, ಅನುರಾಗ್​ ಅವರನ್ನು ದೊಡ್ಡ ಸ್ತ್ರೀವಾದಿ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ, ಅವರ ಜತೆಗೆ ಇನ್ನೊಮ್ಮೆ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ತಾಪ್ಸಿ ಈ ಹಿಂದೆ ಅನುರಾಗ್​ ಕಶ್ಯಪ್​ ನಿರ್ದೇಶನದಲ್ಲಿ 'ಮನ್​ಮರ್ಜಿಯಾನ್​' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿರುವ ತಾಪ್ಸಿ, ಅನುರಾಗ್​ ಕಶ್ಯಪ್​ ಅವರನ್ನು ಸ್ತ್ರೀವಾದಿ ಎಂದಿದ್ದಾರೆ ಮತ್ತು ಈ ಮೂಲಕ ಅನುರಾಗ್​ ಹಾಗೆ ಕೆಟ್ಟದಾಗಿ ನಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

'ನನಗೆ ಗೊತ್ತಿರುವ ದೊಡ್ಡ ಸ್ತ್ರೀವಾದಿ ಎಂದರೆ ಅದು ಅನುರಾಗ್​. ಪ್ರತಿ ಚಿತ್ರದಲ್ಲೂ ಮಹಿಳೆಯರ ಪರವಾಗಿ ನಿಂತವರು ನೀವು. ನಿಮ್ಮ ಇನ್ನೊಂದು ಚಿತ್ರದಲ್ಲಿ ನಟಿಸುವ ಮತ್ತು ಅದರಲ್ಲೂ ಒಬ್ಬ ದಿಟ್ಟ ಮಹಿಳೆಯರ ಪಾತ್ರವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಗಲಿ' ಎಂದು ತಾಪ್ಸಿ ಬರೆದುಕೊಂಡಿದ್ದಾರೆ.

‘ತಾಪ್ಸಿ ಅವರ ಈ ಮಾತಿಗೆ ಬಾಲಿವುಡ್​ನಿಂದ ಯಾವೆಲ್ಲಾ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net