

ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ನಲ್ಲಿ ಗ್ರೂಪ್ ಎ ಹಂತದಲ್ಲಿ ಪಾಕಿಸ್ತಾನ ಬ್ಯಾಕ್ ಟು ಬ್ಯಾಕ್ ಸೋಲಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತಿದ್ದ ಪಾಕ್, ನಿನ್ನೆ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಶರಣಾಯಿತು. ಹೀಗಾಗಿ ಬಾಬರ್ ಅಜಮ್ ಪಡೆ ಇದೀಗ ಮೂಲೆಗುಂಪಾಗಿದೆ. ಆದರೆ, ಸೂಪರ್ 8 ಹಂತಕ್ಕೆ ತಲುಪುವ ಆಸೆ ಪಾಕ್ ಪಾಳಯದಲ್ಲಿ ಇನ್ನೂ ಜೀವಂತವಾಗಿದೆ. ಆದರೆ, ಅದಕ್ಕೆ ಪವಾಡ ನಡೆಯುವುದರ ಜೊತೆಗೆ ಭಾರತದ ಸಹಾಯವೂ ಅಗತ್ಯವಾಗಿ ಬೇಕಿದೆ.
ಗ್ರೂಪ್ 'ಎ'ನಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಯುಎಸ್ಎ ಮತ್ತು ಕೆನಡಾ ಇದೆ. ಪಾಕಿಸ್ತಾನಕ್ಕೆ ಇನ್ನೂ ಎರಡು ಪಂದ್ಯ ಬಾಕಿ ಉಳಿದಿವೆ. ಒಂದು ಕೆನಡಾ ವಿರುದ್ಧ ಮತ್ತೊಂದು ಐರ್ಲೆಂಡ್ ವಿರುದ್ಧ. ಸೂಪರ್ 8 ಹಂತಕ್ಕೆ ತಲುಪಲು ಈ ಎರಡೂ ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಈ ಪಂದ್ಯಗಳು ಯಾವುದೇ ಕಾರಣಕ್ಕೂ ಮಳೆಯಿಂದ ರದ್ದಾಗಬಾರದು. ಇದಿಷ್ಟೇ ಅಲ್ಲದೆ, ಪಾಕಿಸ್ತಾನ ಸೂಪರ್ 8 ಹಂತ ತಲುಪಬೇಕಾದರೆ ಭಾರತವನ್ನು ಅವಲಂಬಿಸಬೇಕಾಗಿದೆ. ಅದು ಹೇಗೆ ಎಂಬುದನ್ನು ನಾವೀಗ ತಿಳಿಯೋಣ.
ಪ್ರತಿ ಗ್ರೂಪ್ನಿಂದ ಎರಡು ತಂಡಗಳು ಟಿ20 ವಿಶ್ವಕಪ್ನ ಸೂಪರ್ 8ರ ಘಟ್ಟವನ್ನು ತಲುಪುತ್ತವೆ. ಸದ್ಯ ಪಾಕಿಸ್ತಾನ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋತು ಶೂನ್ಯ ಅಂಕ ಸಂಪಾದಿಸಿದೆ. ಭಾರತ ಮತ್ತು ಯುಎಸ್ಎ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಪಡೆದುಕೊಂಡಿವೆ. ಸೂಪರ್ 8ರ ಸ್ಥಾನಕ್ಕಾಗಿ ಪಾಕಿಸ್ತಾನ ಈ ಎರಡು ತಂಡಗಳೊಂದಿಗೆ ಪೈಪೋಟಿ ನಡೆಸಬೇಕಿದೆ.
ಸದ್ಯ ಪಾಕಿಸ್ತಾನಕ್ಕೆ ಎರಡು ಪಂದ್ಯಗಳು ಬಾಕಿ ಇವೆ. ಒಂದು ಪಂದ್ಯ ಕೆನಡಾ ವಿರುದ್ಧ ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನೊಂದು ಪಂದ್ಯ ಐರ್ಲೆಂಡ್ ವಿರುದ್ಧ ಫ್ಲೊರಿಡಾದ ಸೆಂಟ್ರಲ್ ಬ್ರೊವಾರ್ಡ್ ಪಾರ್ಕ್ನಲ್ಲಿ ನಡೆಯಲಿದೆ. ಈ ಎರಡು ಪಂದ್ಯಗಳನ್ನು ಪಾಕ್ ದಾಖಲೆ ಅಂತರದಲ್ಲಿ ಗೆಲ್ಲಬೇಕಿದೆ. ಸದ್ಯಕ್ಕೆ -0.15 NRR ಅನ್ನು ಹೊಂದಿದ್ದಾರೆ. ಭಾರತಕ್ಕೆ ಎರಡು ಪಂದ್ಯಗಳು ಬಾಕಿ ಇವೆ. ಒಂದು ಯುಎಸ್ಎ ವಿರುದ್ಧ ಮತ್ತೊಂದು ಐರ್ಲೆಂಡ್ ವಿರುದ್ಧ ಈ ಎರಡು ಪಂದ್ಯಗಳಲ್ಲಿ ಭಾರತ ಗೆಲ್ಲಬೇಕಿದೆ. ಅದರಲ್ಲೂ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದರೆ ಯುಎಸ್ಯ ರನ್ ರೇಟ್ ಕಡಿಮೆಯಾಗಲಿದೆ. ಈ ರೀತಿ ಆದರೆ, ಯುಎಸ್ಎ ಮತ್ತು ಪಾಕಿಸ್ತಾನವು ನಾಲ್ಕು ಅಂಕಗಳಲ್ಲಿ ಸಮನಾಗಿರುತ್ತವೆ ಮತ್ತು ಪಾಕಿಸ್ತಾನವು NRR ಆಧಾರದ ಮೇಲೆ ಸೂಪರ್ 8ಕ್ಕೆ ಅರ್ಹತೆ ಪಡೆಯುತ್ತದೆ.
ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತವು ಯುಎಸ್ಎ ವಿರುದ್ಧ ಆಡಲಿದೆ. ಆದರೆ, ಈ ಮೈದಾನ ಬ್ಯಾಟರ್ಗಳಿಗೆ ಭಯಾನಕ ಬಲೆಯಾಗಿದ್ದು, ಬೃಹತ್ NRR ಸಂಭವಿಸುವ ಸಾಧ್ಯತೆಯಿಲ್ಲ. ಹೀಗಾಗಿ ಸೂಪರ್ 8 ಹಂತಗಳಿಗೆ ಅರ್ಹತೆಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಇದು ಹಿನ್ನೆಡೆಯಾಗಬಹುದು. ಆದರೆ, ಪವಾಡ ನಡೆದಿದ್ದಲ್ಲಿ ಪಾಕ್ ಸೂಪರ್ 8ರ ಹಂತಕ್ಕೆ ತಲುಪಬಹುದು. ಹೀಗಾಗಿ ಪಾಕ್ ಇನ್ನೂ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡಿದೆ. (ಏಜೆನ್ಸೀಸ್)