ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಐಸಿಸಿ! ಪಾಕ್ ಪಾಲಿಗೆ ವರದಾನ?

Rohit and Babar
Published on

ನವದೆಹಲಿ: ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್​ ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ಐಸಿಸಿ ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಈ ಕಿರು ಸ್ಪರ್ಧೆಯಲ್ಲಿ ಟೀಮ್​ ಇಂಡಿಯಾ ಎಲ್ಲರ ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿಯಲಿದೆ. ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಬೇಕಿದೆ. ಈ ವಿಚಾರದಲ್ಲಿ ಟೀಮ್​ ಇಂಡಿಯಾಗೆ ಐಸಿಸಿ ಅನಿರೀಕ್ಷಿತ ಶಾಕ್ ನೀಡಿದ್ದು, ಇದರ ಪರಿಣಾಮ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದ ಮೇಲೆ ಬೀಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಐಸಿಸಿ ಟೀಮ್​ ಇಂಡಿಯಾಗೆ ಕೊಟ್ಟ ಶಾಕ್ ಏನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಿಶ್ವಕಪ್​​ ಆರಂಭಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯವನ್ನು ನ್ಯೂಯಾರ್ಕ್ ಮೈದಾನದಲ್ಲಿ ಆಡಲು ಟೀಮ್​ ಇಂಡಿಯಾ ಯೋಚಿಸಿದೆ. ಅದಕ್ಕಾಗಿ ಐಸಿಸಿಗೆ ಬಿಸಿಸಿಐ ಮನವಿ ಕೂಡ ಸಲ್ಲಿಸಿದೆ. ಆದರೆ, ಬಿಸಿಸಿಐ ಮನವಿಯನ್ನು ಐಸಿಸಿ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆಯಂತೆ. ನ್ಯೂಯಾರ್ಕ್ ಹೊರತುಪಡಿಸಿ, ಫ್ಲೋರಿಡಾದಲ್ಲಿ ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿದೆ.

ಫ್ಲೋರಿಡಾದಲ್ಲಿ ಅಭ್ಯಾಸ ಪಂದ್ಯ ಆಡುವುದರಿಂದ ಟೀಮ್​ ಇಂಡಿಯಾಗೆ ಏನು ತೊಂದರೆ? ಎಂದು ನೋಡುವುದಾದರೆ, ವಿಶ್ವಕಪ್‌ನ ಅಂಗವಾಗಿ ಭಾರತ ನ್ಯೂಯಾರ್ಕ್ ಮೈದಾನದಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ವಿರುದ್ಧವೂ ನಿರ್ಣಾಯಕ ಪಂದ್ಯ ನ್ಯೂಯಾರ್ಕ್​ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ನ್ಯೂಯಾರ್ಕ್​ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ನಡೆದರೆ ಪಿಚ್​ನ ಸ್ವರೂಪ ಗೊತ್ತಾಗುತ್ತದೆ ಎಂಬುದು ಟೀಂ ಇಂಡಿಯಾದ ಯೋಚನೆ. ಅದಕ್ಕಾಗಿಯೇ ಅಭ್ಯಾಸ ಪಂದ್ಯವನ್ನು ಅಲ್ಲಿ ನಡೆಸಲು ಐಸಿಸಿಗೆ ಮನವಿ ಮಾಡಿದೆ.

ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎನ್ನಲಾಗಿದೆ. ಇದರಿಂದ ಟೀಮ್​ ಇಂಡಿಯಾಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ನ್ಯೂಯಾರ್ಕ್​ನಲ್ಲಿ ಅಭ್ಯಾಸ ಪಂದ್ಯ ನಡೆಯದಿರುವುದು ಟೀಂ ಇಂಡಿಯಾಗೆ ತೊಂದರೆ ಆಗಲಿದೆಯೇ? ಪಾಕ್ ಪಂದ್ಯದ ಮೇಲೆ ಪರಿಣಾಮ ಬೀರಲಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net