

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಬಾಲಿವುಡ್ನ ಖ್ಯಾತ ನಟಿ ಸುಶ್ಮಿತಾ ಸೇನ್ ಅಭಿನಯದ ಬಹುನಿರೀಕ್ಷಿತ 'ತಾಲಿ' ವೆಬ್ಸಿರೀಸ್ನ ಟ್ರೇಲರ್ ಯಾವಾಗ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಸ್ವತಃ ಚಿತ್ರದ ನಟಿಯೇ ಅಧಿಕೃತ ಮಾಹಿತಿ ನೀಡಿದ್ದಾರೆ.
ಭಾನುವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುಂದಿನ ವೆಬ್ ಸಿರೀಸ್ 'ತಾಲಿ' ಬಗ್ಗೆ ಮಾಹಿತಿ ನೀಡಿದ ನಟಿ, ಚಿತ್ರದ ಕಿರು ವಿಡಿಯೋವನ್ನು ಪೋಸ್ಟ್ ಮಾಡುವ ಮುಖೇನ ಟ್ರೇಲರ್ ನಾಳೆ (ಆಗಸ್ಟ್ 07) ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸುಶ್ಮಿತಾ ಸೇನ್ ಬಯೋಪಿಕ್ ವೆಬ್ ಸಿರೀಸ್ನಲ್ಲಿ ನಟಿಸಿದ್ದು, ತೃತೀಯ ಲಿಂಗಿ ಕಾರ್ಯಕರ್ತೆಯಾದ ಗೌರಿ ಸಾವಂತ್ ಅವರ ಪಾತ್ರವನ್ನು ತೆರೆಯ ಮೇಲೆ ತರುತ್ತಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಅಭಿಪ್ರಾಯಗಳು ಹರಿದುಬಂದಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶನದ ಈ ಬಯೋಪಿಕ್, ಗೌರಿ ಸಾವಂತ್ ಅವರ ಸ್ಫೂರ್ತಿದಾಯಕ ಜೀವನ ಆಧರಿತ. ಅವರ ಬಾಲ್ಯ, ಪರಿವರ್ತನೆ ಮತ್ತು ಭಾರತದಲ್ಲಿ ಟ್ರಾನ್ಸ್ಜೆಂಡರ್ ಚಳವಳಿಯನ್ನು ಕ್ರಾಂತಿಗೊಳಿಸಲು ಪಟ್ಟ ಶ್ರಮ, ನೀಡಿದ ಕೊಡುಗೆಯ ಕುರಿತು ಚಿತ್ರವನ್ನು ಚಿತ್ರಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಆಗಸ್ಟ್ 15 ರಂದು ಜಿಯೋ ಸಿನಿಮಾದಲ್ಲಿ ತಾಲಿ ವೆಬ್ ಸಿರೀಸ್ ಬಿಡುಗಡೆಯಾಗಲಿದೆ,(ಏಜೆನ್ಸೀಸ್).