

ಉಡುಪಿ: ಟೈರ್ಲಸ್ ಬಾಂಧವರ ಪ್ರಮುಖ ಬೇಡಿಕೆ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಅವರಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಲಾಗುವುದು ಎಂದು ಉಡುಪಿ ಶಾಸಕ ದಶಪಾಲ್ ಸುವರ್ಣ ಭರವಸೆ ನೀಡಿದ್ದಾರೆ.
ಭಾನುವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಕರ್ನಾಟಕ ಸ್ಟೇಟ್ ಟೈರ್ಲಸ್ ಅಸೋಸಿಯೆಶನ್ ಕ್ಷೇತ್ರ ಸಮಿತಿ ವತಿಯಿಂದ ಅಯೋಜಿಸಿದ್ದ ಟೈರ್ಲಸ್ ಬಾಂಧವರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಟೈಲರ್ಗಳ ಕಷ್ಟವನ್ನು ಹತ್ತಿರದಿಂದಲೇ ತಿಳಿದುಕೊಂಡಿದ್ದೇನೆ. ಟೈಲರ್ ಬಾಂಧವರು ಕ್ಷೇಮ ನಿಧಿ ಮಂಡಳಿಯನ್ನ ಪ್ರತ್ಯೇಕ ರಚಿಸಬೇಕು ಎನ್ನುವಂತಹ ಬೇಡಿಕೆ ಇಟ್ಟಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಇಲ್ಲಿ ಅನೇಕ ನೀತಿ ನಿಯಮಗಳಿರುತ್ತದೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು. ಕಾರ್ಮಿಕ ಸಚಿವರ ಗಮನಕ್ಕೂ ತರಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷ ದಯಾನಂದ ಕೋಟ್ಯಾನ್, ಮಂಗಳೂರಿನ ಅಧ್ಯಕ್ಷ ಹರೀಶ್ ರೈ, ಉದ್ಯಮಿ ಪಿ ರಾಜೇಶ್, ಸುನಿಲ್ ಪುರೋಹಿತ್, ಟೈಲರ್ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ನಾರಾಯಣ, ಹಾಸನ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಸಂಕ್ರೇಗೌಡ, ರಾಜ್ಯ ಸಮಿತಿಯ ಕೋಶಾಧಿಕಾರಿ ಕೆ ರಾಮಚಂದ್ರ, ಉಡುಪಿ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಯೋಗೇಶ್ ಕಾಮತ್, ಗುರುರಾಜ್ ಎಂ ಶೆಟ್ಟಿ, ಶಾಂತ ಬಸ್ರೂರು, ಸುರೇಶ್ ಪಾಲನ್, ಲಕ್ಷ್ಮಿ ಆರ್ ಭಟ್ ಮುಂತಾದವರು ಉಪಸ್ಥಿತರಿದ್ದರು.