

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ (72) ಅವರು ಸೋಮವಾರ ನಿಧನರಾಗಿದ್ದಾರೆ. ಅವರು ಇಂದು ಸಂಜೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ಯಾನರ್ನಿಂದ ಬಳಲುತ್ತಿದ್ದ ಅವರು ಅನಾರೋಗ್ಯದ ಕಾರಣ ನೀಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಫರ್ಧೆಯಿಂದ ಹಿಂದೆ ಸರಿದಿದ್ದರು. ಕಳೆದ ಒಂದು ತಿಂಗಳಿನಿಂದ ಏಮ್ಸ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ಬಗ್ಗೆ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌದರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಅವರ ನಿಧನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಸುಶೀಲ್ ಕುಮಾರ್ ಮೋದಿ ಅವರ ಪಾರ್ಥಿವ ಶರೀರವನ್ನು ನಾಳೆ (ಮೇ 14) ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ತಿಳಿದು ಬಂದಿದೆ.
ʼ6 ತಿಂಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಈ ಹಿಂದೆಯೇ ಎಂದು ಹೇಳಿದ್ದರು.
“ಈಗ ಜನರಿಗೆ ನನ್ನ ಆರೋಗ್ಯದ ಬಗ್ಗೆ ಹೇಳುವ ಸಮಯ ಬಂದಿದೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಕ್ಯಾನ್ಸರ್ನಿಂದ ಬಳಲುತ್ತಿರುವ ವಿಚಾರವನ್ನು ತಿಳಿಸುತ್ತಿದ್ದೇನೆ. ನನ್ನ ಆರೋಗ್ಯಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿದ್ದೇನೆ. ದೇಶಕ್ಕೆ, ಬಿಹಾರ ಮತ್ತು ಬಿಜೆಪಿಗೆ ಯಾವಾಗಲೂ ಕೃತಜ್ಞನಾಗಿರುತ್ತೇನೆ ಮತ್ತು ಸಮರ್ಪಿತರಾಗಿರುತ್ತೇನೆ” ಎಂದು 72 ವರ್ಷದ ಸುಶೀಲ್ ಮೋದಿ ಬರೆದುಕೊಂಡಿದ್ದರು.