ನಾಳಿನ ಸಿಎಲ್​ಪಿ ಸಭೆಗೆ ದಯವಿಟ್ಟು ಬನ್ನಿ..: ಸಚಿನ್​ ಪೈಲಟ್​ಗೆ ಲಿಖಿತ ಮನವಿ ಕಳಿಸಿದ ಕಾಂಗ್ರೆಸ್​

Randeep
Published on

ಜೈಪುರ: ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಚಿನ್ ಪೈಲಟ್​ ಅವರು ಇಂದು ಬೆಳಗ್ಗೆ ನಡೆದ ಸಿಎಲ್​ಪಿ ಸಭೆಯಲ್ಲಿ ಹಾಜರಾಗಿರಲಿಲ್ಲ. ಅವರ ಆಪ್ತ ಶಾಸಕರೂ ಸಹ ಪಾಲ್ಗೊಳ್ಳಲಿಲ್ಲ.

ನಾಳೆ (ಜುಲೈ 14) ಮತ್ತೊಮ್ಮೆ ಜೈಪುರದ ಸಿಎಂ ಅಶೋಕ್​ ಗೆಹ್ಲೋಟ್​ ನಿವಾಸದಲ್ಲಿ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್​ ಮುಖಂಡ, ಜೈಪುರ ಕಾಂಗ್ರೆಸ್​ ವೀಕ್ಷಕ ರಣದೀಪ್​ ಸರ್ಜೇವಾಲಾ ಅವರು ಸಚಿನ್​ ಪೈಲಟ್​ ಮತ್ತು ಅವರ ಆಪ್ತ ಶಾಸಕರಿಗೆ ಆಮಂತ್ರಣ ನೀಡಿದ್ದಾರೆ.

ರಾಜಸ್ಥಾನದ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸುವುದಕ್ಕೋಸ್ಕರ ನಾಳೆ ಬೆಳಗ್ಗೆ 10 ಗಂಟೆಗೆ ಮತ್ತೊಂದು ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಈ ಸಭೆಯಲ್ಲಿ ಹಾಜರಿರಿ ಎಂದು ಸಚಿನ್​ ಪೈಲಟ್​ ಮತ್ತು ಅವರ ಆಪ್ತ ಶಾಸಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಲಿಖಿತವಾಗಿಯೂ ಅವರಿಗೆ ಆಹ್ವಾನ ನೀಡಿದ್ದೇವೆ. ಸಭೆಗೆ ಬಂದು ಮಾತನಾಡಿ ಎಂದು ವಿನಂತಿಸಿಕೊಂಡಿದ್ದೇವೆ ಎಂದು ರಣದೀಪ್​ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್​ ರೋಗಿಗಳಿಗೆ ಬೆಂಗಳೂರಿನ ಬಯೋಕಾನ್​ನಿಂದಲೂ ಜೀವರಕ್ಷಕ ಲಸಿಕೆ

ಯಾರಿಗೆ ಏನೇ ಅಸಮಾಧಾನ ಇದ್ದರೂ ಎಲ್ಲರೂ ಕುಳಿತು ಚರ್ಚಿಸೋಣ. ಪ್ರತಿಯೊಬ್ಬರ ಮಾತು, ಅಭಿಪ್ರಾಯ ಕೇಳಲು ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಸಿದ್ಧರಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಅಶೋಕ್​ ಗೆಹ್ಲೋಟ್​ ಮತ್ತವರ ಬಣ ವಿಜಯದ ನಗೆ ಬೀರಿದೆ. ಆದಕ್ಕೆ ಜಗ್ಗದ ಸಚಿನ್​ ಪೈಲಟ್​ ನನಗೆ ಶಾಸಕರ ಬೆಂಬಲವಿದೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net