ಗಿಟಾರ್​ ಬಾರಿಸುತ್ತಿದ್ದಾಗಲೇ ಶಸ್ತ್ರಚಿಕಿತ್ಸೆ:ಡಿಸ್ಟೋನಿಯಾ ರೋಗಿಗೆ ಯಶಸ್ವಿ ಆಪರೇಷನ್​

jain
Published on

ಬೆಂಗಳೂರು: ಡಿಸ್ಟೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಲಾಸ್​ ಏಂಜಲೀಸ್​ನ ಗಿಟಾರ್​ ವಾದಕ ಜೋಸ್​ಫ್​​​ ಡಿಸೋಜಾಗೆ ನಗರದ ಮಹಾವೀರ ಜೈನ್​ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಚಿಕಿತ್ಸೆ ವೇಳೆ ಕಲಾವಿದ ಗಿಟಾರ್​ ನುಡಿಸುತ್ತಿದ್ದರು ಎಂಬುದು ವಿಶೇಷ.

ಈ ಕಾಯಿಲೆಗೆ ಚಿಕಿತ್ಸೆ ಸಿಗುವುದು ಅತ್ಯಪರೂಪ. ಯೂಟ್ಯೂಬ್​ ವಿಡಿಯೋದಲ್ಲಿ ಜೈನ್​ ಆಸ್ಪತ್ರೆ ವೈದ್ಯರ ಸಾಧನೆ ಗಮನಿಸಿದ ಜೋಸ್​ಫ್​​​ ಬೆಂಗಳೂರಿಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ನ್ಯೂರೋ ಸರ್ಜನ್​ ಡಾ.ಶರಣ್​ ಶ್ರೀನಿವಾಸನ್​, ಹಿರಿಯ ನ್ಯೂರೋ ಸರ್ಜನ್​ ಡಾ.ಸಿ.ಸಿ. ಸಂಜೀವ್​ ತಂಡ ಶಸ್ತ್ರಚಿಕಿತ್ಸೆ ನಡೆಸಿತು.

ಬಳಿಕ ಮಾತನಾಡಿದ ಜೋಸ್​ಫ್​​ ಡಿಸೋಜಾ, ಸಂಗೀತ ನನ್ನ ಜೀವನವಾಗಿದೆ. 6ನೇ ವಯಸ್ಸಿಗೆ ಗಿಟಾರ್​ ಕಲಿತೆ. 20ನೇ ವಯಸ್ಸಿಗೆ ಖ್ಯಾತ ಬ್ಯಾಂಡ್​ ಒಂದಕ್ಕೆ ಗಿಟಾರ್​ ನುಡಿಸಿದ್ದೆ. 2004ರವರೆಗೆ ಎಲ್ಲವೂ ಚೆನ್ನಾಗಿತ್ತು. ನಂತರ, ಗಿಟಾರ್​ ನುಡಿಸುವ ವೇಳೆ ಸಾಕಷ್ಟು ಸಮಸ್ಯೆ ಎದುರಿಸಿದ್ದೆ. ಎಡಗೈ ಮಧ್ಯದ ಬೆರಳು, ಕಿರು ಬೆರಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ದಿನದಿಂದ ಈ ಸಮಸ್ಯೆ ಜಟಿಲವಾಯಿತು. ಲಾಸ್​ ಏಂಜೆಲಿಸ್​ನ ವೈದ್ಯರ ಬಳಿ ಪರೀಸಿಕೊಂಡಿದ್ದೆ. ಈ ವೇಳೆ ಡಿಸ್ಟೋನಿಯಾ ಕಾಯಿಲೆ ದೃಢವಾಗಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲವೆಂದು ವೈದ್ಯರು ಹೇಳಿದ್ದರು. ಅಂತಿಮವಾಗಿ ಮಹಾವೀರ ಜೈನ್​ ಆಸ್ಪತ್ರೆ ವೈದ್ಯರ ಸಹಕಾರದಿಂದಾಗಿ ಗುಣಮುಖವಾದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net