ಬೆಂಗಳೂರು: ಅಧಿಕಾರ ಹೋದರೂ ಪರವಾಗಿಲ್ಲ “ಜಾತಿ ಗಣತಿ’ ವರದಿ ಬಿಡುಗಡೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ತಿಂಥಣಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಒತ್ತಾಯಿಸಿದರು.
ವರದಿ ಬಿಡುಗಡೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವುದು ನೋವಿನ ಸಂಗತಿ. ಇಷ್ಟು ದಿನವಾದರೂ ವರದಿ ಬಿಡುಗಡೆ ಮಾಡದೇ ಇರುವುದಕ್ಕೆ ಯಾರೋ ಅವರ ಕೈಕಟ್ಟಿದ್ದಾರೆಂದು ಅನಿಸುತ್ತಿದೆ. ಸಮೀಕ್ಷೆ ಬಿಡುಗಡೆ ಮಾಡಲು ಏಕೆ ವಿಳಂಬ ಮಾಡುತ್ತಿದ್ದೀರಿ? ಇದು ನನಗೆ ಬೇಸರ ತಂದಿದೆ ಎಂದರು. ಜನರಿಗೆ ನ್ಯಾಯ ಸಿಗುವಂತೆ ಮಾಡಲು ತಡಮಾಡದೆ ವರದಿ ಬಿಡುಗಡೆ ಮಾಡಬೇಕು ಎಂದರು.
ಕನಕದಾಸರು, ಬುದ್ಧ, ಬಸವಣ್ಣನವರ ಆಶಯಕ್ಕೆ ತಕ್ಕಂತೆ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಿದ್ದಾರೆ ಎಂದರು. ಕುರುಬ ಸಮುದಾಯದಲ್ಲಿರುವ 18 ಶ್ರೀಮಂತ ಕಲಾ ಪ್ರಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಕುರುಬ ಕಲಾ ಅಕಾಡೆಮಿ ಸ್ಥಾಪಿಸಬೇಕು ಎಂದು ಶ್ರೀಗಳು ಹೇಳಿದರು. ಕನಕದಾಸರ ಹೆಸರು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಧಾರವಾಡ ಸೇರಿ ಯಾವುದಾದರೂ ವಿವಿಗೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.