ಹುಡುಗಿಯ ಹೊಟ್ಟೆಯಲ್ಲಿತ್ತು 2 ಕೆಜಿ ಕೂದಲು; ಈ ವಿಚಿತ್ರ ಘಟನೆಗೆ ಕಾರಣ ತಿಳಿದ್ರೆ ನಿಬ್ಬೆರಗಾಗುವುದು ಪಕ್ಕಾ | Surgery

Untitled-design-2024-10-06T175220.031
Published on

ಲಖನೌ: ವೈದ್ಯರು ಶಸ್ತ್ರಚಿಕಿತ್ಸೆ(Surgery) ಮೂಲಕ ಹುಡುಗಿಯ ಹೊಟ್ಟೆಯಿಂದ ಸುಮಾರು 2 ಕೆಜಿ ತೂಕದ ಕೂದಲನ್ನು ಹೊರತೆಗೆದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿದೆ. ಈ ಹುಡುಗಿ ಕಳೆದ 16 ವರ್ಷಗಳಿಂದ ಕೂದಲು ತಿನ್ನುತ್ತಿದ್ದಳು ಎಂದು ಹೇಳಲಾಗುತ್ತಿದೆ. ಹೊಟ್ಟೆನೋವಿನಿಂದ ಬಾಲಕಿ ತೊಂದರೆ ಅನುಭವಿಸಿದ್ದನ್ನು ಕಂಡ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಆಕೆಯ ಹೊಟ್ಟೆಯಲ್ಲಿದ್ದ ಕೂದಲು ತೆಗೆದಿದ್ದಾರೆ ಎಂದು ವರದಿಯಾಗಿದೆ.

ವಿಷಯ ಬೆಳಕಿಗೆ ಬಂದಿದೆ ವಿಚಿತ್ರ ಸಂಗತಿ. ಬಾಲಕಿ ಕಳೆದ 5 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಸಮಸ್ಯೆ ತೀವ್ರವಾಗಿ ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಮನೆಯವರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದಾಗ ಬಾಲಕಿಯ ಹೊಟ್ಟೆಯಲ್ಲಿ ಕೂದಲು ಇರುವುದು ಕಂಡುಬಂದಿದೆ. ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿ ಆಪರೇಷನ್‌ ಮಾಡಿಸುವಂತೆ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬಾಲಕಿಯ ಹೊಟ್ಟೆಯಿಂದ ಸುಮಾರು 2 ಕೆ.ಜಿ. ತೂಕದ ಕೂದಲನ್ನು ಹೊರತೆಗೆದಿದ್ದಾರೆ.

ಪರೀಕ್ಷೆಯ ನಂತರ ಬಾಲಕಿ ಟ್ರೈಕೊಲೊಟೊ ಮೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ರೋಗದ ಬಗ್ಗೆ ತಿಳಿದ ನಂತರ ವೈದ್ಯರ ತಂಡ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಿದೆ. ಆಪರೇಷನ್ ಮಾಡುವಾಗ ವೈದ್ಯರು ಅದರ ವಿಡಿಯೋ ಕೂಡ ಮಾಡಿದ್ದು, ಅದರಲ್ಲಿ ಬಾಲಕಿಯ ಹೊಟ್ಟೆಯಿಂದ ಬೃಹತ್ ಗಾತ್ರದ ಕೂದಲು ಹೊರಬಂದಿರುವುದು ಕಂಡುಬಂದಿದೆ.

ಟ್ರೈಕೊಲೊಟೊ ಮೇನಿಯಾ ದೀರ್ಘಕಾಲದ ಮನೋವೈದ್ಯಕೀಯ ಅಸ್ವಸ್ಥತೆಯಾಗಿದ್ದು, ಇದು ಕೂದಲನ್ನು ಪದೇ ಪದೆ ಸೇವಿಸುವುದನ್ನು ಒಳಗೊಂಡಿರುತ್ತದೆ. ಕೂದಲು ಆಕೆಯ ಹೊಟ್ಟೆಯ ಕುಳಿಯಲ್ಲಿ ತುಂಬಿ ಕರುಳಿನ ಭಾಗಗಳಿಗೆ ವಿಸ್ತರಿಸಿದೆ. ಇದು ಆಕೆ ಘನ ಆಹಾರ ಸೇವಿಸುವುದನ್ನು ತಡೆದಿದೆ. ಮತ್ತು ದ್ರವವನ್ನು ವಾಂತಿ ಮಾಡುವಂತೆ ಮಾಡಿದೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ ಎಂಪಿ ಸಿಂಗ್ ವಿವರಿಸಿದರು.

ಅವರ 25 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಇರುವ ರೋಗಿಯೊಬ್ಬರು ಪತ್ತೆಯಾಗಿದ್ದಾರೆ. ಆಪರೇಷನ್​​ ಸಾಕಷ್ಟು ಸಂಕೀರ್ಣವಾಗಿತ್ತು. ಆದರೆ ಇಡೀ ತಂಡದ ಕಠಿಣ ಪರಿಶ್ರಮದಿಂದ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಸದ್ಯ ಹುಡುಗಿ ಸುರಕ್ಷಿತವಾಗಿದ್ದಾರೆ ಎಂದು ತಂಡದ ಮುಖ್ಯ ವೈದ್ಯರೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net