More

    ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಬರೆದರೂ ದುಬೈನಲ್ಲಿ ಭಾರಿ ಡಿಮ್ಯಾಂಡ್​! ಭಾರತೀಯರಿಂದಲೂ ಖರೀದಿ ಜೋರು

    ದುಬೈ: ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೇರಿದೆ. ಮಧ್ಯಮ ವರ್ಗದವರಿಗೆ ಚಿನ್ನ ಗಗನ ಕುಸುಮವಾಗುತ್ತಿದೆ. ಹಳದಿ ಲೋಹ ಖರೀದಿಸಲು ಹತ್ತು ಬಾರಿ ಯೋಚಿಸಬೇಕಾದ ಈ ಸಮಯದಲ್ಲಿ ಯುನೈಟೆಡ್ ಅರಬ್​ ಎಮಿರೇಟ್ಸ್​ (ಯುಎಇ)ನಲ್ಲಿ​ ಚಿನ್ನ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ದೇಶದಾದ್ಯಂತ ಚಿನ್ನದ ವ್ಯಾಪಾರದಲ್ಲಿ ದಿಢೀರ್​ ಏರಿಕೆ ಕಂಡಿದೆ.

    ಈ ಬಗ್ಗೆ ನಿಸಿಕಾ ಜ್ಯುವೆಲ್ಲರಿ ಮಾಲೀಕ ನಿಶಿನ್​ ತಸ್ಲೀಮ್​ ಮಾತನಾಡಿ, ಮುಂಬರುವ ದಿನಗಳಲ್ಲಿ ಬೆಲೆ ಇನ್ನೂ ಏರಿಕೆಯಾಗಬಹುದು ಎಂಬ ಆತಂಕ ಮತ್ತು ಅಂದಾಜಿನ ಅಡಿಯಲ್ಲಿ ಈಗಲೇ ಚಿನ್ನ ಖರೀದಿಸಿ ಇಟ್ಟುಕೊಳ್ಳುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ಜನರು ಹಳದಿ ಲೋಹ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಈ ಪ್ರವೃತ್ತಿಯೂ ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ವಿದೇಶಿಯರು ಸೇರಿದಂತೆ ಯುಎಇ ನಿವಾಸಿಗಳು ದಾಖಲೆಯ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಖರೀದಿಸಿದ ಚಿನ್ನದ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾದರೂ, ಅಂಗಡಿಗಳಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ನಿಶಿನ್​ ಹೇಳಿದ್ದಾರೆ.

    ಅಂದಹಾಗೆ ದುಬೈನಲ್ಲಿ ಶುಕ್ರವಾರ ಪ್ರತಿ ಔನ್ಸ್​ ಚಿನ್ನ 2,075 ಡಾಲರ್​ (Rs 1,73,028 ರೂಪಾಯಿ)ಗೆ ಮಾರಾಟವಾಗಿದೆ.

    ಸೈಬಾ ಜ್ಯುವೆಲರ್ಸ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ವಲಸಿಗ ಸುರೇಶ್ ಬಾಬು ಮಾತನಾಡಿ, ದುಬೈನ ಎಲ್ಲ ಚಿನ್ನದ ಮಳಿಗೆಗಳಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ತಿಳಿಸಿದ್ದಾರೆ. ಮತ್ತಷ್ಟು ಬೆಲೆ ಏರಿಕೆ ಆಗಬಹುದೆಂಬ ನಿರೀಕ್ಷೆಯು ಚಿನ್ನದ ಬೆಲೆಯ ದಿಢೀರ್​ ಏರಿಕೆಗೆ ಪ್ರಾಥಮಿಕ ಕಾರಣ ಎಂದು ತಿಳಿಸಿದ್ದಾರೆ. ಅಲ್ಲದೆ, ಡಿಸೆಂಬರ್​ ಅಂತ್ಯದವರೆಗೂ 2400 ಡಾಲರ್​ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    ಮಲಬಾರ್ ಗೋಲ್ಡ್ ಅಂಡ್​ ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಾಮಲಾಲ್ ಅಹ್ಮದ್ ಮಾತನಾಡಿ, ಚಿನ್ನದ ಬೆಲೆಯಲ್ಲಿ ಇದೇ ರೀತಿ ಮತ್ತಷ್ಟು ಏರಿಕೆಯಾಗಲಿದೆ ಎಂದಿದ್ದಾರೆ. ಚಿನ್ನದ ಬೆಲೆಗಳು ಸಾರ್ವಕಾಲಿಕ ದಾಖಲೆ ತಲುಪಿದೆ. ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ನೋಡುವ ಹೂಡಿಕೆದಾರರನ್ನು ಚಿನ್ನ ಹೆಚ್ಚು ಆಕರ್ಷಿಸುತ್ತಿದೆ ಎಂದಿದ್ದಾರೆ.

    ಪ್ರವಾಸಿಗರೂ ಕಾರಣ
    ದುಬೈಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದು ಕೂಡ ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅನೇಕ ಭಾರತೀಯರು ದೀಪಾವಳಿ ರಜೆಯ ನಂತರ ದುಬೈಗೆ ಮರಳಿದ್ದಾರೆ. ಅಲ್ಲದೆ, ಡಿಸೆಂಬರ್ ತಿಂಗಳ ಅನುಕೂಲಕರ ಹವಾಮಾನದಿಂದ ದುಬೈ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡುವ ಕಾರಣ, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ದುಬೈಗೆ ಆಗಮಿಸುತ್ತಿರುವುದು ಕೂಡ ಚಿನ್ನದ ಬೇಡಿಕೆಗೆ ಕಾರಣವಾಗಿದೆ. ಇನ್ನುಷ್ಟು ಬೇಡಿಕೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

    ಒಟ್ಟಾರೆ, ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ಯುಎಇ ಚಿನ್ನದ ಮಳಿಗೆಗಳಲ್ಲಿ ಮಾರಾಟದ ಪ್ರಮಾಣ ಹೆಚ್ಚಾಗಿರುವುದು ಹಳದಿ ಲೋಹದ ಮೇಲೆ ಜನರಿಗೆ ಇರುವ ದೃಢವಾದ ಆಸಕ್ತಿಯನ್ನು ಸೂಚಿಸುತ್ತದೆ. ಮುಂಬರುವ ವಾರಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಂಪಾದಕೀಯ| ಮಧ್ಯಮವರ್ಗದವರಿಗೆ ಹೊಡೆತ

    ರೇವಂತ್ ರೆಡ್ಡಿ ಗುರುವಾರ ತೆಲಂಗಾಣ ಮುಂದಿನ ಮುಖ್ಯಮಂತ್ರಿ- ಗುರುವಾರ ಪ್ರಮಾಣ ವಚನ – ಕಾಂಗ್ರೆಸ್ ಅಧಿಕೃತ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts