

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಧೋನಿ ನಿವೃತ್ತಿ ಘೋಷಿಸಿದ ಕೆಲ ಕ್ಷಣದಲ್ಲೇ ಅವರ ಪರಮಾಪ್ತ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದರು. 13 ವರ್ಷದ ರಾಷ್ಟ್ರೀಯ ತಂಡದ ಭಾಗವಾಗಿದ್ದ ರೈನಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದರು. ರಾಷ್ಟ್ರೀಯ ತಂಡ ಪ್ರತಿನಿಧಿಸಿ ನಿವೃತ್ತಿ ಘೋಷಿಸುವ ಆಟಗಾರರಿಗೆ ಬಿಸಿಸಿಐ, ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿ, ಮಾಧ್ಯಮ ಪ್ರಕಟಣೆ ಹೊರಡಿಸುವುದು ವಾಡಿಕೆ. ಆದರೆ, ಸುರೇಶ್ ರೈನಾ ವಿಚಾರದಲ್ಲಿ ಮಾತ್ರ ಬಿಸಿಸಿಐ ವಿಭಿನ್ನ ನಿಲುವು ತಳೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ, ಬಿಸಿಸಿಐ ವಿರುದ್ಧ ರೈನಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಭಾರತ ತಂಡದ ನಿಗದಿತ ಓವರ್ಗಳಲ್ಲಿ ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಜೋಡೆತ್ತುಗಳಂತೆ ಇದ್ದರು. ಅದೆಷ್ಟೋ ಇನಿಂಗ್ಸ್ಗಳಲ್ಲಿ ತಂಡಕ್ಕೆ ಆಸರೆಯಾಗಿದೆ ಈ ಜೋಡಿ. ಒಟ್ಟಾರೆ 73 ಇನಿಂಗ್ಸ್ ಜತೆಯಾಗಿ ಆಡಿರುವ ಈ ಜೋಡಿ ಸರಾಸರಿ 56.90 ರಂತೆ 3585 ರನ್ ಕಲೆಹಾಕಿತ್ತು. 2011ರ ಏಕದಿನ ವಿಶ್ವಕಪ್ ವಿಜೇತ ಧೋನಿ ಸಾರಥ್ಯದ ತಂಡದಲ್ಲೂ ರೈನಾ ಇದ್ದರು. ಇದಾದ 2 ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ತಂಡದಲ್ಲೂ ರೈನಾ ಇದ್ದರು. ಒಟ್ಟಾರೆ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳಿಂದ 9 ಸಾವಿರ ರನ್ ಗಳಿಸಿದ್ದಾರೆ.
ಮಿ.ಐಪಿಎಲ್ ಎನಿಸಿಕೊಂಡಿರುವ ರೈನಾ, ಇದುವರೆಗೂ 193 ಪಂದ್ಯಗಳಿಂದ 5368 ರನ್ ಕೆಲಹಾಕಿದ್ದಾರೆ. 13 ವರ್ಷಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ ಆಟಗಾರನಿಗೆ ಧೋನಿ ಜತೆಯಲ್ಲೇ ಬಿಸಿಸಿಐ ಶುಭ ಕೋರಬಹುದಿತ್ತು ಎಂದು ರೈನಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.