ಕೋವಿಡ್​-19 ರಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ, ಯುಪಿ ಸಚಿವ ಚೇತನ್​ ಚೌಹಾನ್​ ನಿಧನ

chethan chauchan for web
Published on

ನವದೆಹಲಿ: ಕೋವಿಡ್​-19ರಿಂದ ಬಳಲುತ್ತಿದ್ದ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ಚೇತನ್​ ಚೌಹಾನ್​ ಭಾನುವಾರ ನಿಧನರಾದರು. ಕಳೆದ ತಿಂಗಳು ಕರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದ ಚೇತನ್​ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರದಿಂದ ವೆಂಟಿಲೇಟರ್​ ಸಹಾಯದಲ್ಲಿದ್ದರು. 73 ವರ್ಷದ ಚೇತನ್​ ಚೌಹಾನ್​ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜುಲೈ 12 ರಂದು ಲಖನೌದ ಸಂಜಯ್​ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದರು.

ಚೇತನ್​ ಚೌಹಾನ್​, ಪತ್ನಿ ಹಾಗೂ ಪುತ್ರ ವಿನಾಯಕ ಅವರನ್ನು ಅಗಲಿದ್ದಾರೆ. ಪುತ್ರ ವಿನಾಯಕ್​ ಮೆಲ್ಬೋರ್ನ್​ನಲ್ಲಿ ನೆಲೆಸಿದ್ದು, ಭಾನುವಾರ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ನನ್ನ ಹಿರಿಯರ ಸಹೋದರ ಚೇತನ್​ ಚೌಹಾನ್​ ಇಂದು ನಮ್ಮನ್ನು ಅಗಲಿದ್ದಾರೆ. ಮಗ ವಿನಾಯಕ್​ ಮೆಲ್ಬೋರ್ನ್​ನಿಂದ ಆಗಮಿಸಿದ ಬಳಿಕ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ಚೇತನ್​ ಚೌಹಾನ್​ ಸಹೋದರ ಪುಷ್ಪೇಂದ್ರ ತಿಳಿಸಿದ್ದಾರೆ.

ಚೇತನ್​ ಚೌಹಾನ್​ ರಾಷ್ಟ್ರೀಯ ತಂಡದ ಪರ 40 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಬಹುತೇಕ ಪಂದ್ಯಗಳಲ್ಲಿ ದಿಗ್ಗಜ ಸುನೀಲ್​ ಗಾವಸ್ಕರ್​ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಜತೆಗೆ ದೆಹಲಿ ತಂಡದ ನಾಯಕನಾಗಿ ಕಾರ್ಯನಿರ್ವಸಿದರೆ, ಡಿಡಿಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಮುಖ್ಯ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ತಂಡ, ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಒಮ್ಮೆ ತಂಡದ ಮ್ಯಾನೇಜರ್​ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net