ಮಾಜಿ ಕ್ರಿಕೆಟಿಗ ಚೇತನ್​ ಚೌಹಾನ್​ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ

chethan chauchan and pm for web
Published on

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ಚೇತನ್​ ಚೌಹಾನ್​ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಹಾಗೂ ಕ್ರೀಡಾಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಳೆದ ತಿಂಗಳು ಕರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದ ಚೇತನ್​ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಅವರು ಭಾನುವಾರ ನಿಧನರಾದರು. ಚೇತನ್​ ಚೌಹಾನ್​ ಎರಡು ಬಾರಿ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು.

ಚೇತನ್​ ಚೌಹಾನ್​ ನಿಧನಕ್ಕೆ ಟ್ವೀಟ್​ ಮೂಲತ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತಮ ಕ್ರಿಕೆಟಿಗ ಜತೆಗೆ ರಾಜಕೀಯ ನಾಯಕನಾಗಿದ್ದರು. ಸಾರ್ವಜನಿಕ ಸೇವೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದ್ದಾರೆ. ಮೋದಿ ಅಲ್ಲದೆ, ಗೃಹ ಸಚಿವ ಅಮಿತ್​ ಷಾ, ಬಿಜೆಪಿ ನಾಯಕ ರಾಜೀವ್​ ಪ್ರತಾಪ್​ ರೂಢಿ, ಸಂಸದ ಹಾಗು ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ತಮ್ಮ ಕ್ರೀಡಾ ಜೀವನದ ಹಲವು ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಸಾವಿನ ಸುದ್ದಿ ಆಘಾತ ತಂದಿದೆ ಎಂದು ದಿಗ್ಗಜ ಸಚಿನ್​ ತೆಂಡುಲ್ಕರ್​ ಟ್ವೀಟ್​ ಮಾಡಿದ್ದಾರೆ. ಮಾಜಿ ಕೋಚ್​ ಅನಿಲ್​ ಕುಂಬ್ಳೆ, 2007-08ರಲ್ಲಿ ಆಸ್ಟ್ರೆಲಿಯಾ ಪ್ರವಾಸದ ವೇಳೆ ನಿಮ್ಮೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಯಾವತ್ತಿಗೂ ನಾನು ಮರೆಯುವುದಿಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್, ಶಿಖರ್​ ಧವನ್​, ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.

ಚೇತನ್​, ಜುಲೈ 12 ರಂದು ಲಖನೌದ ಸಂಜಯ್​ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದರು. ಚೇತನ್​ ಚೌಹಾನ್​, ಪತ್ನಿ ಹಾಗೂ ಪುತ್ರ ವಿನಾಯಕ ಅವರನ್ನು ಅಗಲಿದ್ದಾರೆ. ಪುತ್ರ ವಿನಾಯಕ್​ ಮೆಲ್ಬೋರ್ನ್​ನಲ್ಲಿ ನೆಲೆಸಿದ್ದು, ಭಾನುವಾರ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ನನ್ನ ಹಿರಿಯರ ಸಹೋದರ ಚೇತನ್​ ಚೌಹಾನ್​ ಇಂದು ನಮ್ಮನ್ನು ಅಗಲಿದ್ದಾರೆ. ಮಗ ವಿನಾಯಕ್​ ಮೆಲ್ಬೋರ್ನ್​ನಿಂದ ಆಗಮಿಸಿದ ಬಳಿಕ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು ಚೇತನ್​ ಚೌಹಾನ್​ ಸಹೋದರ ಪುಷ್ಪೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net