ಸೂಪರ್​ ಸ್ಟಾರ್​ ರಜನಿಕಾಂತ್​ ಜತೆ ಯಶ್​ ನಟನೆ? ರಾಕಿಭಾಯ್​ ಫ್ಯಾನ್ಸ್​ ಥ್ರಿಲ್​ ಆಗೋ ಸುದ್ದಿ ಇದು…

Rajinikanth,Yash (1)
Published on

ಚೆನ್ನೈ: ಭಾರತೀಯ ಚಿತ್ರರಂಗದೊಳಗೆ ಹಲವರು ಹುಬ್ಬೇರಿಸುವಂತಹ ನ್ಯೂಸ್ ಒಂದು ಹರಿದಾಡುತ್ತಿದೆ. ಅದೇನೆಂದರೆ, ಮೆಗಾ ಸಿನಿಮಾವೊಂದರಲ್ಲಿ ಲೆಜೆಂಡರಿ ಸೂಪರ್​ ಸ್ಟಾರ್​ ರಜನಿಕಾಂತ್​ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​, ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಜಿನಿಕಾಂತ್​ ಅವರು ಸದ್ಯ ಜೈಲರ್​ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಆಗಸ್ಟ್​ 11ರಂದು ತೆರೆಗೆ ಅಪ್ಪಳಿಸಲಿದೆ. ಅಲ್ಲದೆ, ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶನದ ಲಾಲ್​ ಸಲಾಮ್​ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ರಜನಿ ಬಣ್ಣ ಹಚ್ಚಿದ್ದಾರೆ. ರಜನಿ ಅವರ 170ನೇ ಸಿನಿಮಾವನ್ನು ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡಲಿದ್ದು, ಇನ್ನು ಕೆಲವೇ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಲಿದ್ದು, ಪ್ರಮುಖ ಪಾತ್ರಗಳಲ್ಲಿ ಸಿನಿಮಾ ದಂತಕತೆ ಅಮಿತಾಭ್​ ಬಚ್ಚನ್​ ಮತ್ತು ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಕೂಡ ನಟಿಸಲಿದ್ದಾರೆ.

ಕನಗರಾಜ್​ ನಿರ್ದೇಶನ

ರಜನಿಕಾಂತ್​ ಅವರ 171ನೇ ಸಿನಿಮಾವನ್ನು ಲೋಕೇಶ್​ ಕನಗರಾಜ್​ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೇ ಹರಿದಾಡುತ್ತಿದೆ. ಇದು ರಜನಿ ಅವರ ಕೊನೆಯ ಸಿನಿಮಾ ಸಹ ಆಗಬಹುದು ಎಂಬ ಮಾತಿದೆ. ಸಿನಿಮಾದಿಂದ ಅಂತರ ಕಾಯ್ದುಕೊಳ್ಳುವ ಆಸೆಯನ್ನು ರಜನಿ ಹೊಂದಿದ್ದಾರಂತೆ. ಕನಗರಾಜ್​ ನಿರ್ದೇಶನ ಈ ಚಿತ್ರಕ್ಕೆ ಕಮಲ್​ ಹಾಸನ್​ ಅವರ ರಾಜ್​ಕಮಲ್​ ಫಿಲ್ಮ್ಸ್ ಇಂಟರ್ನ್ಯಾಷನಲ್​ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಅಲ್ಲದೆ, ಅನೇಕ ದೊಡ್ಡ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ಹೇಳಲಾಗುತ್ತಿದೆ.

ಯಶ್​ ಕೂಡ ಓಕೆ ಎನ್ನುವ ಸಾಧ್ಯತೆ

ಇದೆಲ್ಲದರ ನಡುವೆ ಇದೀಗ ಮೆಗಾ ನ್ಯೂಸ್​ ಒಂದು ಕಾಲಿವುಡ್​ ಗಲ್ಲಿಯಲ್ಲಿ ಓಡಾಡುತ್ತಿದೆ. ರಜನಿ ಅವರ 171ನೇ ಸಿನಿಮಾದಲ್ಲಿ ರಜನಿಗೆ ಸಮನಾದ ಪಾತ್ರದಲ್ಲಿ ಯಶ್​ ಅವರನ್ನು ಆಯ್ಕೆ ಮಾಡಲು ಕನಗರಾಜ್​ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಯಶ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕನಗರಾಜ್​ ಜೊತೆ ಒಳ್ಳೆಯ ಸ್ನೇಹ ಇರುವುದರಿಂದ ಯಶ್​ ಕೂಡ ಓಕೆ ಎನ್ನುವ ಸಾಧ್ಯತೆ ಇದೆ. ಅಲ್ಲದೆ, ಯಶ್​ ತಾನೊಬ್ಬ ರಜನಿಕಾಂತ್​ ಅವರ ಅಪ್ಪಟ್ಟ ಅಭಿಮಾನಿ ಎಂದು ಹೇಳಿಕೊಂಡಿರುವುದರಿಂದ ರಜನಿ ಜತೆ ನಟಿಸುವ ಅವಕಾಶವನ್ನು ಮಿಸ್​ ಮಾಡಿಕೊಳ್ಳದೆ ಗ್ರೀನ್​ ಸಿಗ್ನಲ್​ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಿನಿಮಾ ಕುರಿತಾದ ಮಹತ್ವದ ಮಾಹಿತಿಗಳು ಈ ವರ್ಷದ ಅಂತಿಮದಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಸದ್ಯ ಈ ಸುದ್ದಿ ಮಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಅಂದಹಾಗೆ ಲೋಕೇಶ್​ ಕನಗರಾಜ್​ ಅವರು ಸದ್ಯ ವಿಜಯ್​ ನಟನೆಯ ಲಿಯೋ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ ಸಂಗೀತವಿದೆ. ತ್ರಿಷಾ ಅವರು ವಿಜಯ್​ಗೆ ನಾಯಕಿಯಾಗಿದ್ದಾರೆ. ಸಂಜಯ್​ ದತ್​, ಅರ್ಜುನ್​, ಮನ್ಸೂರ್​ ಅಲಿ ಖಾನ್​ ಸೇರಿದಂತೆ ಪ್ರಮುಖರ ತಾರಾಗಣ ಈ ಚಿತ್ರಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net