ಬೇಕರಿಯಲ್ಲಿ ಅನುಚಿತ ವರ್ತನೆ: ವಿಡಿಯೋ ರೆಕಾರ್ಡ್​ಗೆ ಹೆದರಿ ಇನ್ಸ್​ಪೆಕ್ಟರ್​ ಸಡನ್​ ಗಪ್​ಚುಪ್​!

UP Police Inspector
Published on

ಕಾನ್ಪುರ: ಬೇಕರಿ ಮಾಲೀಕನ ಜತೆ ಪಾನಮತ್ತ ಪೊಲೀಸ್​ ಅಧಿಕಾರಿಯೊಬ್ಬರು ವಾಗ್ವಾದಕ್ಕೆ ಇಳಿದು, ಗಲಾಟೆ ಮಾಡಿರುವುದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಧಿಕಾರಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೇಕರಿಯಲ್ಲಿ ಹೈಡ್ರಾಮ

ಮಾಲೀಕನ ಪ್ರಕಾರ ಬೇಕರಿಯಲ್ಲಿ ದಾಂಧಲೆ ಎಬ್ಬಿಸಿದ್ದು ಓರ್ವ ಪೊಲೀಸ್​ ಇನ್ಸ್​ಪೆಕ್ಟರ್. ಖರೀದಿಸಿ ತಿನಿಸಿಗೆ ಹಣ ಪಾವತಿಸುವಂತೆ ಬೇಕರಿ ಮಾಲೀಕ ಕೇಳಿದಾಗ ತಾಳ್ಮೆ ಕಳೆದುಕೊಂಡ ಇನ್ಸ್​ಪೆಕ್ಟರ್​, ನನ್ನನ್ನೇ ಹಣ ಕೇಳುತ್ತೀಯಾ ಅಂತ ಬೇಕರಿಯಲ್ಲಿ ಹೈಡ್ರಾಮ ಮಾಡಿದ್ದಾರೆ. ಅಧಿಕಾರಿಯ ಅನುಚಿತ ವರ್ತನೆಯ ದೃಶ್ಯವನ್ನು ಬೇಕರಿಯಲ್ಲಿದ್ದ ಬೇರೊಬ್ಬರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ರೆಕಾರ್ಡ್​ ನೋಡಿ ಗಪ್​ಚುಪ್​

ಮೊದಲು ಹಣ ಕೊಡದೇ ಸತಾಯಿಸಿ, ಗಲಾಟೆ ಮಾಡಿದ ಇನ್ಸ್​ಪೆಕ್ಟರ್​, ಯಾವಾಗ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿರುವುದು ಗೊತ್ತಾಯಿತೋ ಇದ್ದಕ್ಕಿದ್ದಂತೆ ಸುಮ್ಮನಾಗಿಬಿಡುತ್ತಾರೆ. ಬೇಕರಿಯ ಕೌಂಟರ್​ನಲ್ಲಿ ನಿಂತು ಫೋನ್​ ಹಿಡಿದು ಯಾರೊಂದಿಗೆ ಮಾತನಾಡುವ ದೃಶ್ಯ ವಿಡಿಯೋದಲ್ಲಿದೆ.

ಸ್ಕ್ಯಾನ್ ಮಾಡಲು ಸಾಧ್ಯವಾಗದಷ್ಟು ಅಮಲು

ಮತ್ತೊಂದು ವಿಡಿಯೋದಲ್ಲಿ ತನ್ನ ಬಿಲ್​ ಎಷ್ಟಾಯಿತು ಎಂದು ಮಾಲೀಕನನ್ನು ಇನ್ಸ್​ಪೆಕ್ಟರ್​ ಕೇಳಿದ್ದಾರೆ. ಅದಕ್ಕೆ ಮಾಲೀಕ 110 ರೂ. ಎಂದು ಹೇಳುತ್ತಾರೆ. ಬಳಿಕ ಪಾನಮತ್ತ ಇನ್ಸ್​ಪೆಕ್ಟರ್​ ಯುಪಿಐ ಸ್ಕ್ಯಾನ್​ ಮಾಡಿ ಹಣ ಪಾವತಿಸಲು ಯತ್ನಿಸುತ್ತಾರೆ. ಆದರೆ, ಕಂಠಪೂರ್ತಿ ಕುಡಿದಿದ್ದರಿಂದ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಪೊಲೀಸ್​ ಅಧಿಕಾರಿ ಎಷ್ಟು ಕುಡಿದಿದ್ದರು ಅಂದರೆ, ಪಾವತಿಗಾಗಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಸಹ ಸಾಧ್ಯವಾಗಲಿಲ್ಲ ಎಂದು ಮಾಲೀಕ ಹೇಳಿದ್ದಾರೆ.

ಅಧಿಕಾರಿ ಸಸ್ಪೆಂಡ್​

ಕೆಲ ನೆಟ್ಟಿಗರು ಇನ್ಸ್​ಪೆಕ್ಟರ್​ ಅನುಚಿತ ವರ್ತನೆಯ ವಿಡಿಯೋಗಳನ್ನು ಕಾನ್ಪುರ ಮತ್ತು ಉತ್ತರ ಪ್ರದೇಶ ಪೊಲೀಸ್​ ಇಲಾಖೆಗೆ ಟ್ಯಾಗ್​ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನ್ಪುರ ಪೊಲೀಸರು, ಆ ಅಧಿಕಾರಿಯನ್ನು ಸಸ್ಪೆಂಡ್​ ಮಾಡಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net