ಕನ್ನಡದಲ್ಲಿ ವೆಬ್​ಸೀರೀಸ್​ಗಳಿಲ್ಲ ಎನ್ನುವವರಿಗೆ 'ಸೂಪರ್​ ಕಪಲ್​'

Super Couple - Final
Published on

ಬೆಂಗಳೂರು: ಬೇರೆ ಭಾಷೆಗಳಲ್ಲಿ ವೆಬ್​ಸೀರೀಸ್​ಗಳಿಗೆ ಭರ್ಜರಿ ಬೇಡಿಕೆ ಇದೆ, ಕನ್ನಡದಲ್ಲಿ ಮಾತ್ರ ವೆಬ್​ಸೀರೀಸ್​ಗಳು ಬರುತ್ತಿಲ್ಲ ಎಂದು ಬೇಸರದಲ್ಲಿ ಮಾತನಾಡುವವರಿಗೆ ಇದೀಗ ಹೊಸ ವೆಬ್​ಸರಣಿಯೊಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಬೆಂಗಳೂರು ಮೂಲದ ಮಾಧ್ಯಮ ಅನೇಕ ಸಂಸ್ಥೆಯು 'ಸೂಪರ್ ಕಪಲ್' ಎಂಬ 10 ಎಪಿಸೋಡುಗಳ ಹೊಸ ವೆಬ್​ಸರಣಿ ನಿರ್ಮಿಸಿದ್ದು, ಭಾನುವಾರ ಬೆಳಿಗ್ಗೆ 11ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಲಿದೆ.

ಬೆಂಗಳೂರಿನಂಥ ಮಹಾನಗರದಲ್ಲಿ ವಾಸಮಾಡುತ್ತಾ ಆಧುನಿಕ ಜೀವನ ಶೈಲಿ ರೂಢಿಸಿಕೊಂಡಿರುವ ಯುವ ದಂಪತಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಉದ್ಭವ ಆಗುವ ಹಲವಾರು ಸ್ವಾರಸ್ಯಕರ ಹಾಸ್ಯ ಪ್ರಸಂಗಗಳನ್ನು ಬಿಂಬಿಸುವ ವೆಬ್ ಸರಣಿ ಈ 'ಸೂಪರ್​ ಕಪಲ್​'.

ಇಲ್ಲಿ ಪತಿ ಮತ್ತು ಪತ್ನಿಯ ಗುಣ ಸ್ವಭಾವಗಳು ಭಿನ್ನ, ಆದರೆ, ಪರಸ್ಪರ ಇಬ್ಬರಿಗೂ ಅಪಾರ ಪ್ರೀತಿ ಮತ್ತು ಗೌರವ. ಇಬ್ಬರದ್ದೂ ಒಂದೇ ಗುರಿಯಾದರೂ ದಾರಿ ವಿಭಿನ್ನ. ಇಂಥಾ ಜೋಡಿಯ ಬದುಕಿನಲ್ಲಿ ನಡೆಯುವ ಘಟನೆಗಳನ್ನೇ ಈ ವೆಬ್​ಸೀರೀಸ್​ನಲ್ಲಿ ಕಟ್ಟಿಕೊಡಲಾಗಿದೆ.

ಜನವರಿ 3ರ ಭಾನುವಾರದಂದು, ಯೂಟ್ಯೂಬ್​ನ ಮಾಧ್ಯಮ ಅನೇಕ ಚಾನಲ್​​ನಲ್ಲಿ ಈ ವೆಬ್​ಸರಣಿ ಸ್ಟ್ರೀಮಿಂಗ್ ಆಗಲಿದೆ. 'ಸೂಪರ್ ಕಪಲ್​'ನ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಟೀಸರ್​ಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಈ ವೆಬ್ ಸೀರೀಸ್​​ನಲ್ಲಿ ಕಿರುತೆರೆಯಲ್ಲಿ ಈಗಾಗಲೇ ಹೆಸರು ಮಾಡಿರುವ 'ನಮ್ಮನೆ ಯುವರಾಣಿ' ಸೀರಿಯಲ್​​ನಲ್ಲಿ ಸಾಕೇತ್ ಆಗಿ ಮಿಂಚಿರುವ ರಘು ಅವರು ಈಶ್ವರ್ ಪಾತ್ರದಲ್ಲಿ ಹಾಗೂ ಕೊಡಗು ಮೂಲದ ತೇಜಸ್ವಿನಿ ಅವರು ಶಾರ್ವರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಅಗ್ನಿಸಾಕ್ಷಿ' ಸೀರಿಯಲ್ ಖ್ಯಾತಿಯ ಐಶ್ವರ್ಯ ಸಾಲಿಮಠ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. 'ಡೀಲ್ ರಾಜ' ಚಿತ್ರವನ್ನು ನಿರ್ದೇಶಿಸಿದ್ದ ರಾಜ್ ಗೋಪಿ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net