ಸುನಿತಾ ವಿಲಿಯಮ್ಸ್​ ಭೂಮಿಗೆ ಆಗಮನ ವಿಚಾರ: ಮಹತ್ವದ ಹೇಳಿಕೆ ನೀಡಿದ ನಾಸಾ! Sunita Williams

Sunita Williams
Published on

Sunita Williams : ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ತಮ್ಮ ಬಾಹ್ಯಾಕಾಶ ಯಾತ್ರೆಯನ್ನು ಕೊನೆಗೂ ಪೂರ್ಣಗೊಳಿಸಿದ್ದಾರೆ. ಒಂಬತ್ತು ತಿಂಗಳ ಬಾಹ್ಯಾಕಾಶ ಯಾತ್ರೆ ಕೆಲವೇ ಗಂಟೆಗಳಲ್ಲಿ ಕೊನೆಗೊಳ್ಳಲಿದ್ದು, ಕೆಲವೇ ದಿನಗಳಲ್ಲಿ ಭೂಮಿಯನ್ನು ತಲುಪಲಿದ್ದಾರೆ. ಈ ಕುರಿತು ನಾಸಾ ಮಹತ್ವದ ಹೇಳಿಕೆಯನ್ನು ನೀಡಿದೆ.

ನಾಸಾ ಹೇಳಿಕೆ ಪ್ರಕಾರ ಸುನಿತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಮಂಗಳವಾರ ಅಮೆರಿಕದ ಸಮಯ ಸಂಜೆ 5.57ಕ್ಕೆ ಭೂಮಿಯನ್ನು ತಲುಪಲಿದ್ದಾರೆ. ಇಬ್ಬರು ಗಗನಯಾತ್ರಿಗಳನ್ನು ಕರೆತರಲು ಬಾಹ್ಯಾಕಾಶಕ್ಕೆ ಹೋದ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನೌಕೆ ಕ್ರೂ ಡ್ರ್ಯಾಗನ್ ಭಾನುವಾರ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತು. ಕ್ರೂ-10 ಕಾರ್ಯಾಚರಣೆಗೆ ಹೋದ ನಾಲ್ವರು ಗಗನಯಾತ್ರಿಗಳು ಒಬ್ಬೊಬ್ಬರಾಗಿ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ.

ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ವಾಪಸಾತಿ ಪ್ರಯಾಣ ಸೋಮವಾರ ರಾತ್ರಿ 10.45ಕ್ಕೆ ಆರಂಭವಾಗಲಿದೆ. ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಮಂಗಳವಾರ ಸಂಜೆ 5.57 ಕ್ಕೆ ಫ್ಲೋರಿಡಾ ಕರಾವಳಿಯ ನೀರಿನಲ್ಲಿ ಇಳಿಯಲಿದೆ. ಈ ವೇಳೆ ಗಗನಯಾತ್ರಿಗಳನ್ನು ಒಬ್ಬೊಬ್ಬರಾಗಿ ಹೊರಗೆ ಕರೆದೊಯ್ಯಲಾಗುವುದು ಎಂದು ನಾಸಾ ಬಹಿರಂಗಪಡಿಸಿದೆ.

ಸುನೀತಾ ಮತ್ತು ವಿಲ್ಮೋರ್ ಜೊತೆಗೆ, ಇತರ ಇಬ್ಬರು ಗಗನಯಾತ್ರಿಗಳು ಸಹ ಭೂಮಿಗೆ ಹಿಂತಿರುಗುತ್ತಾರೆ. 2024, ಜೂನ್ 5ರಂದು ಉಡಾವಣೆಯಾದ ಬೋಯಿಂಗ್​ ಬಾಹ್ಯಾಕಾಶ ನೌಕೆ 'ಸ್ಟಾರ್‌ಲೈನರ್'ನಲ್ಲಿ ಸುನೀತಾ ಮತ್ತು ವಿಲ್ಮೋರ್ ಐಎಸ್​ಎಸ್​ಗೆ ತಲುಪಿದರು. ವೇಳಾಪಟ್ಟಿಯ ಪ್ರಕಾರ ಸುನೀತಾ ಮತ್ತು ವಿಲ್ಮೋರ್ ಕೇವಲ ಒಂದು ವಾರದಲ್ಲಿ ಭೂಮಿಯನ್ನು ತಲುಪಬೇಕಿತ್ತು. ಆದಾಗ್ಯೂ, ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಅದು ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿತು. ಅಂದಿನಿಂದ, ಸುನೀತಾ ಮತ್ತು ವಿಲ್ಮೋರ್ ಐಎಸ್​ಎಸ್​ನಲ್ಲಿ ಸಿಲುಕಿಕೊಂಡಿದ್ದರು. ಸುಮಾರು 9 ತಿಂಗಳ ನಂತರ ಅಂತಿಮವಾಗಿ, ಕೆಲವೇ ಗಂಟೆಗಳಲ್ಲಿ, ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net