Sunita Williams : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವ ಕಾಲ ಸನ್ನಿಹಿತವಾಗಿದೆ. ಪ್ರಸ್ತುತ ಮಾಹಿತಿಯ ಪ್ರಕಾರ, ಇಬ್ಬರೂ ಮಾರ್ಚ್ 19 (ಬುಧವಾರ) ರಂದು ಭೂಮಿಗೆ ಮರಳಲಿದ್ದಾರೆ.

ಕೇವಲ ಎಂಟು ದಿನಗಳ ಕಾಲ ಐಎಸ್ಎಸ್ಗೆ ಹೋದ ಗಗನಯಾತ್ರಿಗಳು ಅನಿವಾರ್ಯ ಕಾರಣಗಳಿಂದ ತಿಂಗಳುಗಟ್ಟಲೆ ಅಲ್ಲಿಯೇ ಇರಬೇಕಾಯಿತು. ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಟ್ಟಲೆ ಕಳೆದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ NASA ಎಷ್ಟು ಹಣವನ್ನು ಪಾವತಿಸುತ್ತದೆ ಎಂಬುದರ ಕುರಿತು ಚರ್ಚೆಯೂ ನಡೆಯುತ್ತಿದೆ. ಈ ಸಮಯದಲ್ಲಿ, ಗಗನಯಾತ್ರಿಗಳ ವೇತನ ಭತ್ಯೆಗಳ ಕುರಿತು ಹಲವಾರು ವರದಿಗಳು ಬೆಳಕಿಗೆ ಬಂದಿವೆ.
ಅಮೆರಿಕದ ಫೆಡರಲ್ ಸರ್ಕಾರದ ಅತ್ಯುನ್ನತ ಮಟ್ಟದ ಹುದ್ದೆಗಳು ಜಿಎಸ್ (ಸಾಮಾನ್ಯ ವೇಳಾಪಟ್ಟಿ)-15 ವರ್ಗದಲ್ಲಿವೆ. 2024ರ ಅಂದಾಜಿನ ಪ್ರಕಾರ ಆ ವರ್ಗದ ಉದ್ಯೋಗಿಗಳು ವರ್ಷಕ್ಕೆ 1,36,908 ಡಾಲರ್ನಿಂದ 1,78,156 ಡಾಲರ್ವರೆಗೆ ಸಂಬಳ ಪಡೆಯುತ್ತಿದ್ದರು. ಆ ಅಂದಾಜಿನ ಪ್ರಕಾರ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾರ್ಷಿಕ ವೇತನವು 1,25,133 ಮತ್ತು 1,62,672 ಡಾಲರ್ (ಭಾರತೀಯ ಕರೆನ್ಸಿಯಲ್ಲಿ 1.08 ಕೋಟಿಯಿಂದ 1.41 ಕೋಟಿ ರೂಪಾಯಿ) ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.
ನಾಸಾದ ನಿವೃತ್ತ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಕಾರ, ಗಗನಯಾತ್ರಿಗಳಿಗೆ ಯಾವುದೇ ವಿಶೇಷ ಅಧಿಕಾವಧಿ ವೇತನವಿಲ್ಲ. ಅವರು ಫೆಡರಲ್ ಉದ್ಯೋಗಿಗಳಾಗಿರುವುದರಿಂದ, ಬಾಹ್ಯಾಕಾಶದಲ್ಲಿ ಅವರ ಸಮಯವನ್ನು ಭೂಮಿಯ ಮೇಲಿನ ಯಾವುದೇ ನಿಯಮಿತ ಕೆಲಸದ ಪ್ರವಾಸದಂತೆಯೇ ಪರಿಗಣಿಸಲಾಗುತ್ತದೆ. ಅವರು ತಮ್ಮ ನಿಯಮಿತ ವೇತನವನ್ನು ಗಳಿಸುತ್ತಲೇ ಇರುತ್ತಾರೆ. ಅದರ ಜೊತೆಗೆ ನಾಸಾ ISSನಲ್ಲಿ ಅವರ ಆಹಾರ ಮತ್ತು ಜೀವನ ವೆಚ್ಚವನ್ನು ಮಾತ್ರ ಭರಿಸುತ್ತದೆ. ಸದ್ಯದ ಅನಿರೀಕ್ಷಿತ ಬೆಳವಣಿಗೆಗಳ ಸಂದರ್ಭದಲ್ಲಿ ದಿನಕ್ಕೆ ನಾಲ್ಕು ಡಾಲರ್ ಅಂದರೆ, 347 ರೂಪಾಯಿ ಮಾತ್ರ ಪಾವತಿಸುತ್ತದೆ. ಇದು ಅವರ ಆಹಾರ ಮತ್ತು ಜೀವನ ವೆಚ್ಚವಾಗಿರುತ್ತದೆ ಎಂದು ಕ್ಯಾಡಿ ಕೋಲ್ಮನ್ ಹೇಳಿದರು.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 8 ದಿನಗಳ ಬದಲಿಗೆ 287 ದಿನಗಳನ್ನು ISS ನಲ್ಲಿ ಕಳೆಯಲಿದ್ದಾರೆ. ಅವರಿಗೆ ಕೇವಲ 1,148 ಡಾಲರ್ (1 ಲಕ್ಷ ರೂ.) ಹೆಚ್ಚುವರಿ ವೇತನ ನೀಡಲಾಗುವುದು. ಪರಿಣಾಮವಾಗಿ, ಅವರಿಗೆ ಅವರ ಮೂಲ ಸಂಬಳದ ಜೊತೆಗೆ ಹೆಚ್ಚುವರಿಯಾಗಿ 1,148 ಡಾಲರ್ (ಸುಮಾರು 1 ಲಕ್ಷ ರೂ.) ಪಾವತಿಸಲಾಗುತ್ತದೆ. ಈ ಕಾರ್ಯಾಚರಣೆಗಾಗಿ ಅವರ ಒಟ್ಟು ಗಳಿಕೆ 94,998 ಡಾಲರ್ನಿಂದ 1,23,152 ಡಾಲರ್ (ಸುಮಾರು 82 ಲಕ್ಷ ದಿಂದ 1.06 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹೋಗಿ ಇಂದಿಗೆ 284 ದಿನಗಳು! ಅವರು 2024ರ ಜೂನ್ 5ರಂದು ಐಎಸ್‌ಎಸ್ ತಲುಪಿದರು. ಜೂನ್ 12 ಅಥವಾ 15 ರಂದು ಭೂಮಿಗೆ ಹಿಂತಿರುಗಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ಏಕೆಂದರೆ, ಸುನೀತಾ ಮತ್ತು ಅವರ ಸಹ-ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಭೂಮಿಯ ಕಕ್ಷೆಯಿಂದ ಸುಮಾರು 400 ಕಿ.ಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಯಶಸ್ವಿಯಾಗಿ ಸಾಗಿಸಿದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ, ತಾಂತ್ರಿಕ ಸಮಸ್ಯೆಯಿಂದಾಗಿ ಅವರನ್ನು ವಾಪಸ್ ಕರೆತರಲು ಸಾಧ್ಯವಾಗಲಿಲ್ಲ.
‘ನಾಸಾ’ ತಂಡವು ಭೂಮಿಯಿಂದ ಸ್ಟಾರ್‌ಲೈನರ್‌ಗೆ ಮಾಡಿದ ದುರಸ್ತಿಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆದಾಗ್ಯೂ, ಒಂದು ವಾರ ಕೆಲಸಕ್ಕೆ ಹೋಗಿ ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ಉಳಿದಿದ್ದ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ, ಎಲಾನ್ ಮಸ್ಕ್ ಅವರ ಕಂಪನಿ ‘ಸ್ಪೇಸ್‌ಎಕ್ಸ್’ ನಲ್ಲಿ ಚಾಲನೆಯಲ್ಲಿರುವ ‘ಕ್ರೂ-10’ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಲಾಗಿದೆ. ಕ್ರೂ-10 ಮಿಷನ್ ಯಶಸ್ವಿಯಾಗಿ ISS ನೊಂದಿಗೆ ಸಂಪರ್ಕ ಸಾಧಿಸಿದ್ದು, ಮಾರ್ಚ್ 19ರಂದು ಇಬ್ಬರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಲಿದ್ದಾರೆ. (ಏಜೆನ್ಸೀಸ್)
ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಗುಡುಗಿದ ಹುಬ್ಬಳ್ಳಿ ಹುಲಿ ವಿಶ್ವನಾಥ್ ಸಜ್ಜನರ್! Harsha Sai
ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti