ವಾಷಿಂಗ್ಟನ್ ಡಿಸಿ: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಗಗನಯಾತ್ರಿಗಳನ್ನು ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಭೂಮಿಗೆ ಕರೆತರುವ ಸಾಧ್ಯತೆ ಇದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ(NASA)ಈ ಮಾಹಿತಿಯನ್ನು ನೀಡಿದೆ.
ಇದನ್ನು ಓದಿ: ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಣೆ.. ಹೊಸ ವಿವಾದ ಸೃಷ್ಟಿಸಿದ ಗಗನಯಾತ್ರಿಗಳ ಫೋಟೋ; NASA ಕೊಟ್ಟ ಸ್ಪಷ್ಟನೆ ಹೀಗಿದೆ..
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಐಎಸ್‌ಎಸ್‌ಗೆ ಕೊಂಡೊಯ್ದ ಬೋಯಿಂಗ್‌ನ ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ವರ್ಷ ಜೂನ್‌ನಿಂದ ಅಂದರೆ ಎಂಟು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಮುಂಬರುವ ಗಗನಯಾತ್ರಿ ವಿಮಾನಗಳಿಗಾಗಿ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಅನ್ನು ಬದಲಾಯಿಸಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಮರಳಿ ಕರೆತರಲು ಈ ಹಿಂದೆ ಮಾರ್ಚ್ 25 ರಂದು ಉಡಾವಣೆ ಮಾಡಲು ನಿಗದಿಪಡಿಸಲಾಗಿತ್ತು, ಆದರೀಗ ಮಾರ್ಚ್ 12ಕ್ಕೆ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಆದರೆ ಈ ಉಡಾವಣೆಗೆ ಕಾರ್ಯಾಚರಣೆಯ ಸಿದ್ಧತೆಗಳು ಮತ್ತು ಏಜೆನ್ಸಿಯ ಹಾರಾಟ ಸಿದ್ಧತೆ ಪ್ರಕ್ರಿಯೆಯ ಪ್ರಮಾಣೀಕರಣ ಬಾಕಿ ಉಳಿದಿದೆ. ಇದರ ನಂತರ ಮಾರ್ಚ್ 12 ರಂದು ಏಜೆನ್ಸಿಯ ಕ್ರೂ-10 ಉಡಾವಣೆಯನ್ನು ನಿಗದಿಪಡಿಸಲಾಗಿದೆ ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರೂ-9 ಮಿಷನ್ ಹೊಸದಾಗಿ ಆಗಮಿಸಿದ ಕ್ರೂ-10 ಸಿಬ್ಬಂದಿಯೊಂದಿಗೆ ಹಲವು ದಿನಗಳ ಹಸ್ತಾಂತರದ ಅವಧಿಯ ನಂತರ ಭೂಮಿಗೆ ಮರಳಲು ಯೋಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ವಿಲಿಯಮ್ಸ್, ವಿಲ್ಮೋರ್, ನಾಸಾ ಗಗನಯಾತ್ರಿ ನಿಕ್ ಹೇಗ್ ಹಾಗೂ ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಸೇರಿದ್ದಾರೆ.
ಕ್ರೂ-10 ಮಿಷನ್ ನಾಸಾ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಅಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಅವರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲಿದೆ.(ಏಜೆನ್ಸೀಸ್)