ಸಚಿನ್​, ಕೊಹ್ಲಿ, ನೀರಜ್​ ಅಲ್ಲವೇ ಅಲ್ಲ ಭಾರತದ ಶ್ರೇಷ್ಠ ಆಟಗಾರ ಈತನೇ! ಸುನೀಲ್​ ಗವಾಸ್ಕರ್​ ಅಚ್ಚರಿ ಹೇಳಿಕೆ

Sunil Gavaskar
Published on

ನವದೆಹಲಿ: ಭಾರತವು ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೊಂದಿದೆ. ಕ್ರಿಕೆಟ್​​ನಲ್ಲಿ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ರಾಹುಲ್​ ದ್ರಾವಿಡ್, ವಿವಿಎಸ್​ ಲಕ್ಷ್ಮಣ್, ಎಂ.ಎಸ್​. ಧೋನಿ, ವಿರಾಟ್​ ಕೊಹ್ಲಿ, ರೋಹಿತ್ ಶರ್ಮ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ.

ಹಾಕಿಯಲ್ಲಿ ದಿಗ್ಗಜ ಧ್ಯಾನ್ ಚಂದ್, ಕುಸ್ತಿಯಲ್ಲಿ ಸುಶೀಲ್ ಕುಮಾರ್, ರವಿ ದಹಿಯಾ, ವಿನೇಶ್ ಫೋಗಟ್ ಜೊತೆಗೆ ಇನ್ನೂ ಕೆಲವು ಸ್ಟಾರ್ ಕುಸ್ತಿಪಟುಗಳಿದ್ದಾರೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ, ಟೆನ್ನಿಸ್​ಲ್ಲಿ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಇದಾರೆ. ಬ್ಯಾಡ್ಮಿಂಟನ್‌ನಲ್ಲಿ ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಪಿವಿ ಸಿಂಧು ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಸ್ಟಾರ್ ಆಟಗಾರರಿದ್ದಾರೆ. ಆದರೆ, ಅವರೆಲ್ಲರ ನಡುವೆ ಭಾರತದ ಅತ್ಯುತ್ತಮ ಆಟಗಾರ ಯಾರೆಂಬುದನ್ನು ಟೀಮ್​ ಇಂಡಿಯಾದ ಕ್ರಿಕೆಟ್​ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ.

ಭಾರತವು ಎಲ್ಲ ಕ್ರೀಡಾ ವಿಭಾಗಗಳಲ್ಲಿ ದಿಗ್ಗಜ ಆಟಗಾರರನ್ನು ಹೊಂದಿದೆ. ಅನೇಕ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿದ್ದಾರೆ ಮತ್ತು ಅದ್ಭುತ ಸಾಧನೆಗಳೊಂದಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಆದರೆ, ನನ್ನ ದೃಷ್ಟಿಯಲ್ಲಿ ಭಾರತದ ಅತ್ಯುತ್ತಮ ಆಟಗಾರ ಎಂದರೆ ಅದು ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಎಂದು ಟೀಮ್​ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ನಾನು ಇತರ ಕ್ರೀಡೆಗಳಲ್ಲಿ ಎಲ್ಲ ಶ್ರೇಷ್ಠ ಆಟಗಾರರನ್ನು ಗೌರವಿಸುತ್ತೇನೆ. ಆದರೆ, ನನ್ನ ಅಭಿಪ್ರಾಯದಲ್ಲಿ, ಪ್ರಕಾಶ್ ಪಡುಕೋಣೆ ಭಾರತದ ಅತ್ಯುತ್ತಮ ಆಟಗಾರ ಎಂದಿದ್ದಾರೆ.

ಆಟದಿಂದ ಮಾತ್ರವಲ್ಲ ಪ್ರಕಾಶ್ ಪಡುಕೋಣೆ ಅವರ ನಡವಳಿಕೆ ಕೂಡ ನನ್ನ ಮೇಲೆ ಪ್ರಭಾವ ಬೀರಿದೆ. ಬ್ಯಾಡ್ಮಿಂಟನ್‌ನಲ್ಲಿ ಅವರ ಅದ್ಭುತ ಸಾಧನೆಗಳು ಮೆಚ್ಚುವಂಥದ್ದು ಎಂದಿದ್ದಾರೆ. ಆ ದಿನಗಳಲ್ಲಿ ಬ್ಯಾಡ್ಮಿಂಟನ್​ ಆಟದಲ್ಲಿ ಇದ್ದ ಕಠಿಣ ನಿಯಮಗಳ ಹೊರತಾಗಿಯೂ ಪ್ರಕಾಶ್ ಆಡಿದ ರೀತಿ ಅದ್ಭುತವಾಗಿತ್ತು. ಡ್ಯಾನಿಶ್ ಹಾಗೂ ಚೀನಾ ಆಟಗಾರರು ಪ್ರಾಬಲ್ಯ ಮೆರೆದ ಆ ದಿನಗಳಲ್ಲಿ ಅವರನ್ನು ಸೋಲಿಸಿದ್ದರು. ಎದುರಾಳಿಗಳಿಗೆ 7 ರಿಂದ 10 ಅಂಕಗಳನ್ನು ಮಾತ್ರ ನೀಡುತ್ತಿದ್ದರು ಎಂದು ಟೀಮ್​​ ಇಂಡಿಯಾದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net