

ಮುಂಬೈ: ನೆಗೆಟಿವ್ ರೋಲ್ಗಳಲ್ಲಿ ಮಿಂಚುತ್ತಾ ಸಿಕ್ಕ ಅವಕಾಶವನ್ನು ಬಳಸಿಕೊಂಡು ವೃತ್ತಿಜೀವನದಲ್ಲಿ ಸಕ್ಸಸ್ ಕಡೆಗೆ ಸಾಗುತ್ತಿರುವ ವಿಜಯ್ ವರ್ಮಾ(Vijay Varma) ಅವರನ್ನು ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೆಬ್ ಸರಣಿಗಳಲ್ಲಿನ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇನ್ನು ವಿಜಯ್ ವರ್ಮಾ ಅವರು ತಮ್ಮ ನೆಗೆಟಿವ್ ಪಾತ್ರಗಳ ಕುರಿತು ಇತ್ತೀಚೆಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್ ವರ್ಮಾ ನೆಗೆಟಿವ್ ಪಾತ್ರಗಳಲ್ಲಿ ನಟಿಸಿರುವುದು ನನ್ನ ಮೇಲೆ ಪರಿಣಾಮ ಬೀರಿದೆ. ಅದರಿಂದ ಅನಾನುಕೂಲವಾಗಿದೆ ಎಂದು ಹೇಳಿದ್ದಾರೆ. ಡಾರ್ಲಿಂಗ್ಸ್, ಪಿಂಕ್ ಮತ್ತು OTT ಸರಣಿ ದಹದ್‌ನಲ್ಲಿನ ನೆಗೆಟಿವ್ ಪಾತ್ರದಿಂದ ಹೆಸರುವಾಸಿಯಾಗಿದ್ದಾರೆ. ನೆಗೆಟಿವ್ ರೋಲ್ನಲ್ಲಿ ನನ್ನನ್ನು ನೋಡಿರುವ ಹುಡುಗಿಯರು ಮತ್ತು ಮಹಿಳೆಯರು ನನ್ನನ್ನು ನೋಡಿ ಭಯಪಡುತ್ತಾರೆ ಎಂದು ಹೇಳಿದರು.
ನೆಗೆಟಿವ್ ಪಾತ್ರದ ಆಫರ್ ನನಗೆ ಪಿಂಕ್ ಸಿನಿಮಾದಿಂದ ಆರಂಭವಾಯಿತು. ಪಿಂಕ್' ಚಿತ್ರದಲ್ಲಿನ ಅವರ ಪಾತ್ರವು ಚಿಕ್ಕದಾಗಿದ್ದರೂ ಅದು ಸಾಕಷ್ಟು ಪ್ರಭಾವ ಬೀರಿದೆ ಎಂದು ವಿಜಯ್ ತಿಳಿಸಿದರು. ಜತೆಗೆ ಪಿಂಕ್ ಸಿನಿಮಾದ ಸ್ಕ್ರೀನಿಂಗ್ ವೇಳೆ ನಡೆದ ಘಟನೆಯೊಂದನ್ನು ಹಂಚಿಕೊಂಡರು.
ಪಿಂಕ್ ಸಿನಿಮಾದ ಸ್ಕ್ರೀನಿಂಗ್ ಮೊದಲು ಎಲ್ಲರೂ ಸಂತೋಷವಾಗಿದ್ದರು ಆದರೆ ಕೊನೆಯಲ್ಲಿ ಅಳುತ್ತಿದ್ದರು. ಆ ಸಮಯದಲ್ಲಿ ನಾನು ಗಾಯಕಿ ಸುನಿಧಿ ಚೌಹಾಣ್ ಅವರಿಗೆ ಸಾಂತ್ವನು ಹೇಳಲು ಪ್ರಯತ್ನಿಸಿದೆ. ಅವರನ್ನು ಮಾತನಾಡಿಸಿದೆ. ಆದರೆ ಅವರು ನನ್ನ ಹತ್ತಿರ ಬರಬೇಡ. ನನಗೆ ನಿನ್ನಿಂದ ತುಂಬಾ ಭಯವಾಗಿದೆ ಎಂದು ಹೇಳಿದರು. ನಾನು ಅಯ್ಯೋ ದೇವರೇ ಏನಾಯಿತು ಎಂದು ಕೇಳಿದೆ.
ಅದಕ್ಕೆ ಅಲ್ಲೇ ಇದ್ದ ನಿರ್ದೇಶಕರು ನನ್ನನ್ನು ಪಕ್ಕಕ್ಕೆ ಎಳೆದುಕೊಂಡು ಪಾತ್ರ ಚೆನ್ನಾಗಿ ಮಾಡಿರುವುದಾಗಿ ಹೊಗಳಿದರು ಎಂದು ಹೇಳಿದರು. ಬಳಿಕ ವಿಜಯ್ ಚಿತ್ರದಲ್ಲಿನ ತಮ್ಮ ಪಾತ್ರಗಳಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾಗಿ ತಿಳಿಸಿದರು. ವಿಜಯ್ ವರ್ಮಾ ಅವರಿಗೆ 2019ರಲ್ಲಿ ತೆರೆಕಂಡ ಸಿನಿಮಾ ಗಲ್ಲಿ ಬಾಯ್ ಅವರ ವೃತ್ರಿಜೀವನದಲ್ಲಿ ದೊಡ್ಡ ಬ್ರೇಕ್ ನೀಡಿತು. ಈ ಪಾತ್ರದಿಂದ ಅವರು ಜನರ ಗಮನ ಸೆಳೆದರು. ಅದರ ನಂತರ ಡಾರ್ಲಿಂಗ್ಸ್ (2022), ಮಿರ್ಜಾಪುರ್ ಮತ್ತು ಸರಣಿ ದಹದ್ (2023) ನಲ್ಲಿನ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಭಾವಂತ ನಟ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. (ಏಜೆನ್ಸೀಸ್)