

ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ನಂತರ ಪೊಲೀಸರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್(Lawrence Bishnoi) ಬೆದರಿಕೆ ಹಾಕಿರುವ ವಿಚಾರದ ಗೊತ್ತೆ ಇದೆ. ಈ ಕುರಿತು ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಬಾ ಸಿದ್ದಿಕಿ ಹತ್ಯೆಯಿಂದ ಹಿಡಿದು ಕೃಷ್ಣಮೃಗ ಬೇಟೆಯ ವಿಷಯದವರೆಗೆ ಎಲ್ಲದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಜತೆ ವಿಶೇಷ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಬಾಬಾ ಸಿದ್ದಿಕಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲಿಂ ಖಾನ್, ಬಾಬಾ ಸಿದ್ದಿಕಿ ಹತ್ಯೆಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಭಾಗಿಯಾಗಿದ್ದರೂ, ಸಲ್ಮಾನ್ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ನಂಬುತ್ತೇವೆ. ನಮ್ಮ ಪ್ರಕಾರ ಇದು ಪ್ರತ್ಯೇಕ ವಿಚಾರ,ಆಸ್ತಿ ವಿವಾದದಿಂದ ಈ ಸಮಸ್ಯೆ ಉದ್ಭವಿಸಿರಬಹುದು ಎಂದು ಹೇಳಿದ್ದಾರೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು , ಪ್ರಕರಣ ಬೆಳಕಿಗೆ ಬಂದ ನಂತರ ಈ ವಿಚಾರದ ಬಗ್ಗೆ ಸಲ್ಮಾನ್ ಬಳಿ ನಾನು ಕೇಳಿದೆ. ಅದಕ್ಕೆ ಆವರು ನಾನು ಯಾವುದೇ ಪ್ರಾಣಿಯನ್ನು ಕೊಂದಿಲ್ಲ ಎಂದು ಹೇಳಿದರು. ಸಲ್ಮಾನ್ಗೆ ಪ್ರಾಣಿಗಳನ್ನು ಕೊಲ್ಲವ ಹವ್ಯಾಸವಿಲ್ಲ. ಅವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಸಲ್ಮಾನ್ ಯಾವುದೇ ಪ್ರಾಣಿಯನ್ನು ಕೊಂದಿಲ್ಲ. ಇದುವರೆಗೂ ಒಂದು ಜಿರಳೆಯನ್ನು ಕೊಂದಿಲ್ಲ ಎಂದು ಹೇಳಿದರು.
ಈ ಆರೋಪವನ್ನು ನಾವು ನಂಬುವುದಿಲ್ಲ. ಇದನ್ನು ಮಾಡಿದವರು ಯಾರು ಎಂದು ಆ ಸಮಯದಲ್ಲಿ ಸಲ್ಮಾನ್ ಅವರನ್ನು ಕೇಳಲಾಯಿತು. ಅದಕ್ಕೆ ಅವರು ನಾನು ಆ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿಸಿದರು. ಘಟನೆ ನಡೆದಾಗ ಅವರು ಕಾರಿನಲ್ಲಿ ಇರಲಿಲ್ಲ ಎಂದು ಹೇಳಿದರು. ಸಲ್ಮಾನ್ ಖಾನ್ ಎಂದಿಗೂ ನನಗೆ ಸುಳ್ಳು ಹೇಳುವುದಿಲ್ಲ. ಅಲ್ಲದೆ ನಾವು ಬಂದೂಕುಗಳನ್ನು ಬಳಸುವುದಿಲ್ಲ ಎಂದು ತಿಳಿಸಿದರು.
ಬಿಷ್ಣೋಯ್ ಗ್ಯಾಂಗ್ನಿಂದ ಬರುತ್ತಿರುವ ಜೀವ ಬೆದರಿಕೆ ಬಗ್ಗೆ ಮಾತನಾಡಿದ ಅವರು ಇದೊಂದು ಸುಲಿಗೆ ಪ್ರಕರಣ ಎಂದು ಹೇಳಿದರು. 5 ಕೋಟಿ ನೀಡುವಂತೆ ಬೇಡಿಕೆ ಬಂದಿದೆ ಇದರಿಂದಲೇ ಇದನ್ನು ಸುಲಿಗೆ ಪ್ರಕರಣ ಎಂದು ಹೇಳಬಹುದು. ನಾವು ಮೊದಲಿನಿಂದಲೂ ಇದನ್ನೇ ಹೇಳುತ್ತಲೇ ಬಂದಿದ್ದೇವೆ. ಅಲ್ಲದೆ ಜೀವ ಮತ್ತು ಸಾವು ದೇವರ ಕೈಯಲ್ಲಿದೆ. ಗೌರವ, ಅವಮಾನ, ಜೀವನ ಮತ್ತು ಸಾವು ನನ್ನ ಕೈಯಲ್ಲಿದೆ ಎಂದು ಕುರಾನ್ ಷರೀಫ್ನಲ್ಲಿದೆ. ಜೀವನ ಮತ್ತು ಸಾವು ಅವನ ಕೈಯಲ್ಲಿದ್ದರೆ ನಾವು ನೋಡುತ್ತೇವೆ ಎಂದು ಹೇಳಿದರು.
ಕೃಷ್ಣಮೃಗ ಬೇಟೆ ವಿಚಾರಕ್ಕೆ ಸಂಬಂಧಸಿದಂತೆ ಕ್ಷಮೆಯಾಚಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಯಾರ ಬಳಿ ಕ್ಷಮೆ ಕೇಳಬೇಕು. ಏನಾದರೂ ತಪ್ಪು ಮಾಡಿದ್ದರೆ ಕ್ಷಮೆಯನ್ನು ಕೇಳಬೇಕಾಗುತ್ತದೆ. ಚರ್ಚ್ನಲ್ಲಿಯೂ ತಪ್ಪೊಪ್ಪಿಗೆ ಮಾಡುವಾಗ ನೀವು ಮೋಸ ಮಾಡಿದ ವ್ಯಕ್ತಿಗೆ, ಸರ್ ನಾನು ನಿಮಗೆ ಮೋಸ ಮಾಡಿದ್ದೇನೆ. ನಾನು ನಿಮಗೆ ನೋವುಂಟು ಮಾಡಿದ್ದೇನೆ. ಆದರಿಂದ ನಿಮ್ಮಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ ಎಂದು ಹೇಳಲಾಗುತ್ತದೆ. ತಪ್ಪೊಪ್ಪಿಗೆ ಎಂದರೆ ಇದನ್ನೂ ಸಹ ಅರ್ಥೈಸುತ್ತದೆ. ಆದರೆ ತಪ್ಪ ಮಾಡದಿದ್ದಾಗ ಕ್ಷಮೆ ಯಾರಿಗೆ ಕೇಳಬೇಕು ಎಂದಿದ್ದಾರೆ.(ಏಜೆನ್ಸೀಸ್)