ಚರ್ಚ್ ಹೊರಗೆ ಸುಯಿಸೈಡ್ ಬಾಂಬರ್​ಗಳ ದಾಳಿ

indo
Published on

ಮಕಾಸ್ಸರ್ : ಇಂಡೋನೇಷ್ಯಾದ ಮಕಾಸ್ಸರ್‌ ನಗರದ ಚರ್ಚ್‌ ಒಂದರ ಹೊರಗೆ ಇಬ್ಬರು ಸುಯಿಸೈಡ್​ ಬಾಂಬರ್​ಗಳು ಆತ್ಮಾಹುತಿ ಮಾಡಿಕೊಂಡಿದ್ದಾರೆ. ಈಸ್ಟರ್ ವಾರದ ಮೊದಲ ದಿನವಾದ ಇಂದು ಪ್ರಾರ್ಥನೆಗಾಗಿ ಹಲವಾರು ಜನರು ಸೇರಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಫೋಟದಲ್ಲಿ ಹದಿನಾಲ್ಕು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸುಲವೇಸಿ ದ್ವೀಪದಲ್ಲಿರುವ ಕ್ಯಾಥೋಲಿಕ್ ಚರ್ಚ್‌ನ ಒಳಗೆ ಮಾಸ್​ ಆರಂಭವಾಗುತ್ತಿದ್ದ ಸಮಯಕ್ಕೆ ಇಬ್ಬರು ಆತ್ಮಾಹುತಿ ಬಾಂಬರ್‌ಗಳು, ಹೊರಗಡೆ ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಒಬ್ಬ ಬಾಂಬರ್ ಮೋಟರ್​ಬೈಕ್ ಮೇಲೆ ಚರ್ಚಿನ ಒಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದು, ಭದ್ರತಾ ಸಿಬ್ಬಂದಿ ತಡೆದಿದ್ದರು ಎಂದು ಪಾದ್ರಿ ವಿಲ್ಹೆಮಸ್ ತುಲಕ್ ಹೇಳಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮೇಲ್ನೋಟಕ್ಕೆ ಚರ್ಚ್​ನ ಮೇಲೆ ಧಾಳಿ ನಡೆಸುವ ಪ್ರಯತ್ನ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಯಾವ ಸಂಘಟನೆಯೂ ಇದರ ಜವಾಬ್ದಾರಿ ವಹಿಸಿಕೊಂಡಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net