

ಢಾಕಾ : ಹಿಂದೂ ಮಾನ್ಯತೆಯ ಪ್ರಕಾರ 51 ಶಕ್ತಿ ಪೀಠಗಳಲ್ಲಿ ಒಂದಾದ ಜೇಶೋರೇಶ್ವರಿ ಕಾಳಿ ಮಂದಿರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪೂಜೆ ಸಲ್ಲಿಸಿದರು. ಈಗ ಬಾಂಗ್ಲಾದೇಶದ ಗಡಿ ಜಿಲ್ಲೆಯಾದ ಸತ್ಖೀರಾದ ಈಶ್ವರೀಪುರ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ತಮ್ಮ ಬಾಂಗ್ಲಾ ಪ್ರವಾಸದ ಎರಡನೇ ದಿನ ಮೋದಿ ಭೇಟಿ ನೀಡಿದರು.
16ನೇ ಶತಮಾನದಲ್ಲಿ ಹಿಂದೂ ರಾಜನೊಬ್ಬ ಕಟ್ಟಿಸಿದ ಎನ್ನಲಾದ ಈ ದೇವಾಲಯಕ್ಕೆ, ಪೂರ್ವನಿಯೋಜಿತ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದ ಮೋದಿ, ಕಾಳಿ ಮಾತೆಗೆ ಮುಕುಟವೊಂದನ್ನು ಅರ್ಪಿಸಿದರು. ಈ ಮುಕುಟವನ್ನು ಮೂರು ವಾರಗಳ ಅವಧಿಯಲ್ಲಿ ಪಾರಂಪರಿಕ ಕಲಾಕರನೊಬ್ಬ ಚಿನ್ನದ ಪ್ಲೇಟಿಂಗ್ನೊಂದಿಗೆ ಬೆಳ್ಳಿಯಿಂದ ತಯಾರಿಸಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ದೇವಾಲಯದ ಅರ್ಚಕರು ಮಂತ್ರ ಹೇಳುತ್ತಿರುವಾಗ ಕೆಳಗೆ ಕೂತು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವ ತಮ್ಮ ವಿಡಿಯೋ ಒಂದನ್ನು ಮೋದಿ ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, "ಕೆಲವೇ ವಾರಗಳಲ್ಲಿ ಚೈತ್ರೀ ನವರಾತ್ರಿ ಆರಂಭವಾಗಲಿದೆ. ಈ ಪವಿತ್ರ ಸಮಯಕ್ಕೆ ಮುಂಚೆ 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಈ ಪುಣ್ಯ ಸ್ಥಳದಲ್ಲಿ ನನಗೆ ಮಾ ಕಾಳಿಯ ದರ್ಶನ ಭಾಗ್ಯ ಲಭಿಸಿದೆ. ಮಾನವರು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಕಾಳಿಮಾತೆಯ ವರದಹಸ್ತ ನಮ್ಮ ಮೇಲಿರಬೇಕು. ಹಾಗಾಗಿ ಕಾಳಿಮಾತೆಯಲ್ಲಿ ಮಾನವ ಜನಾಂಗವನ್ನು ಆದಷ್ಟು ಬೇಗ ಕೋವಿಡ್-19 ರಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದ್ದೇನೆ" ಎಂದು ಹೇಳಿದರು.
ಈ ದೇವಾಲಯದಲ್ಲಿ ನಡೆಯುವ 'ಮಾ ಕಾಳಿ ಮೇಳ'ದಲ್ಲಿ ಭಾರತದ ಮತ್ತು ಬಾಂಗ್ಲಾದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಭಕ್ತರ ಉಪಯೋಗಕ್ಕಾಗಿ ಬಹೂಪಯೋಗಿ ಸಮುದಾಯ ಭವನವೊಂದನ್ನು ಭಾರತ ನಿರ್ಮಿಸುವುದಾಗಿ ಘೋಷಿಸಿದರು. "ಸ್ಥಳೀಯರಿಗೆ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಳಕೆಯಾಗುವಂತಿರಬೇಕು. ಮುಖ್ಯವಾಗಿ ಸೈಕ್ಲೋನ್ನಂಥ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಪ್ರತಿಯೊಬ್ಬರಿಗೂ ಆಶ್ರಯವಾಗಿರಬೇಕು. ಅಂತಹ ಭವನದ ನಿರ್ಮಾಣ ಕಾರ್ಯವನ್ನು ಭಾರತ ಮಾಡಲಿದೆ. ಈ ಕಾರ್ಯಕ್ಕೆ ನಮಗೆ ಶುಭ ಕೋರಿರುವ ಬಾಂಗ್ಲಾದೇಶ ಸರ್ಕಾರಕ್ಕೆ ನಾನು ಋಣಿಯಾಗಿದ್ದೇನೆ" ಎಂದು ಮೋದಿ ಹೇಳಿದರು. (ಏಜೆನ್ಸೀಸ್)