ಈ ವಾರವೂ ಬಿಗ್​ಬಾಸ್​ಗೆ ಬರಲ್ಲ ಕಿಚ್ಚ ಸುದೀಪ್​! ಅನಾರೋಗ್ಯದಿಂದ ಚೇತರಿಸಿಕೊಂಡರೂ ಬಾರದಿರುವುದಕ್ಕೆ ಕಾರಣವೇನು?

sudeep
Published on

ಬೆಂಗಳೂರು: ಬಿಗ್​ಬಾಸ್ ಸೀಸನ್​ 8 ಅದ್ಭುತವಾಗಿ ಮೂಡಿ ಬರುತ್ತಿದೆ. ನಟ ಕಿಚ್ಚ ಸುದೀಪ್​ ಕಾರ್ಯಕ್ರಮವನ್ನು ಎಲ್ಲರ ಮನ ಗೆಲ್ಲುವಂತೆ ನಡೆಸಿಕೊಡುತ್ತಿದ್ದಾರೆ. ಆದರೆ ಕಳೆದ ಎರಡು ವಾರಗಳಿಂದ ಕಿಚ್ಚ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿಲ್ಲ. ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಬಿಗ್​ಬಾಸ್​ಗೆ ಬರಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದರು. ಈ ವಾರ ಬಂದೇ ಬರುತ್ತೇನೆ ಎಂದು ಕೂಡ ತಿಳಿಸಿದ್ದರು. ಆದರೆ ಅಷ್ಟರಲ್ಲಾಗಲೇ ಬಿಗ್​ಬಾಸ್​ ಮೇಲೂ ಕರೊನಾ ಕರಿ ನೆರಳು ತಾಕಿದೆ.

ಹೌದು ಕರೊನಾ ನಿಯಂತ್ರಣ ಮಾಡುವ ಸಲುವಾಗಿ, ರಾಜ್ಯಾದ್ಯಂತ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಸಿನಿಮಾ, ಕಿರುತೆರೆ ಶೂಟಿಂಗ್​ಗೂ ಬ್ರೇಕ್​ ಹಾಕಲಾಗಿದೆ. ಅದೇ ಕಾರಣಕ್ಕೆ ಈ ವಾರ ಕಿಚ್ಚ ವೇದಿಕೆ ಮೇಲೆ ನಿಂತು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗುವುದಿಲ್ಲ. ಕಳೆದ ಎರಡು ವಾರಗಳಂತೆ ಈ ವಾರವೂ ನಾಮಿನೇಷನ್​ ಆಗಿರುವ ಸ್ಪರ್ಧಿಗಳನ್ನು ವಿವಿಧ ಚಟುವಟಿಕೆಗಳ ಮೂಲಕವೇ ಎಲಿಮಿನೇಟ್​ ಮಾಡಲಾಗುವುದು ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ವಾಹಿನಿ, "ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ, ಕಿಚ್ಚ ಸುದೀಪ್ ಅವರ ಜತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ." ಎಂದು ತಿಳಿಸಿದೆ. ಇದು ಕಿಚ್ಚನ ಅಭಿಮಾನಿಗಳಲ್ಲಿ ನಿರಾಸೆ ತಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net