ನದಿ ದಡದಲ್ಲಿ ಟನ್​ಗಟ್ಟಲೆ ಮೀನಿನ ರಾಶಿ! ತಿಂದರೆ ನೀವೂ ಸಾಯುತ್ತೀರ ಹುಷಾರ್​ ಎಂದ ಅಧಿಕಾರಿಗಳು

fish
Published on

ಬೈರುತ್​: ಹತ್ತಾರು ಟನ್ ಸತ್ತ ಮೀನುಗಳು ನದಿ ದಡಕ್ಕೆ ಬಂದು ಸೇರಿರುವ ಘಟನೆ ಲೆಬನಾನ್​ ದೇಶದ ಖಾರೌನ್ ಪ್ರದೇಶದಲ್ಲಿ ನಡೆದಿದೆ. ಪ್ರಸಿದ್ಧ ಲಿಟಾನಿ ನದಿಯಲ್ಲಿದ್ದ ಲಕ್ಷಾಂತರ ಮೀನುಗಳು ಸತ್ತಿರುವುದಾಗಿ ತಿಳಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಮೀನುಗಳು ಸಾಯುತ್ತಿದ್ದು, ತೇಲುತ್ತಾ ನದಿ ದಡಕ್ಕೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ಸುತ್ತ ಮುತ್ತಲಿರುವ ಹಳ್ಳಿಗಳಲ್ಲಿ ದುರ್ವಾಸನೆ ಶುರುವಾಗಿದೆ. ಮೀನುಗಳ ಜತೆ ರಾಶಿ ಕಸವೂ ಬಂದು ನಿಂತಿದೆ. ಈಗಾಗಲೇ ಹತ್ತಾರು ಯುವಕರು ಮೀನುಗಳನ್ನು ಅಲ್ಲಿಂದ ತೆಗೆದು ನದಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ತ್ಯಾಜ್ಯ ಹೆಚ್ಚಿರುವುದರಿಂದಾಗಿ ಸ್ವಚ್ಛತೆ ಕಷ್ಟವಾಗಿದೆ ಎನ್ನಲಾಗಿದೆ.

ಈವರೆಗೆ ಸುಮಾರು 40 ಟನ್​ ಮೀನುಗಳು ಸತ್ತಿರುವುದಾಗಿ ಹೇಳಲಾಗಿದೆ. ಈ ಘಟನೆಗೆ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಲಿಟಾನಿ ನದಿ ಪ್ರಾಧಿಕಾರಕ್ಕೆ ಒತ್ತಾಯಿಸಿದ್ದಾರೆ. ನದಿಯ ಮೀನುಗಳಲ್ಲಿ ವೈರಸ್​ ಸೇರಿದ್ದು, ಮೀನುಗಳು ವಿಷಕಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾರೊಬ್ಬರೂ ಮೀನುಗಾರಿಕೆ ಮಾಡಬಾರದು. ಆ ಮೀನು ತಿನ್ನುವುದರಿಂದ ಮನುಷ್ಯರ ಜೀವನಕ್ಕೂ ಹಾನಿಯಾಗಬಹುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net