

ಹೈದರಾಬಾದ್: ಬಯಕೆ ಈಡೇರಿತು ಎಂದು ತಿರುಪತಿ ತಿಮ್ಮಪ್ಪನಿಗೆ ನೀಡಿದ್ದ ಮುಡಿ ಕೊಡುವ ಪ್ರತಿಜ್ಞೆಯನ್ನು ನೆರವೇರಿಸಿ ಖುಷಿಯಿಂದಲೇ ಮನೆಗೆ ಮರಳಿದ ಉಬರ್ ಚಾಲಕ ಶ್ರೀಕಾಂತನಿಗೆ ಭಾರಿ ಆಘಾತವೊಂದು ಕಾದಿತ್ತು. ಆತನ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.
ಹೈದರಾಬಾದ್ನಲ್ಲಿ ವಾಸವಿರುವ ಶ್ರೀಕಾಂತ್ ತಿರುಪತಿ ತಿಮ್ಮಪ್ಪ ದರ್ಶನ ಮುಗಿಸಿ ಮನೆಗೆ ಬಂದು ಕೆಲಸಕ್ಕೆ ಹಾಜರಾಗಲು ಮುಂದಾದಾಗ ಆತನಿಗೆ ಶಾಕ್ ಎದುರಾಯಿತು. ಅಂದಹಾಗೆ ಈ ಘಟನೆ ಫೆಬ್ರವರಿ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉಬರ್ ಪಾಲುದಾರ ಖಾತೆಗೆ ಲಾಗ್ ಇನ್ ಆಗಲು ಶ್ರೀಕಾಂತ್ ಮುಂದಾದಾಗಿದ್ದಾರೆ. ಆದರೆ, ಮುಡಿ ಕೊಟ್ಟಿದ್ದರಿಂದ ಶ್ರೀಕಾಂತ್ ಮುಖವನ್ನು ಗುರುತಿಸಲು ಆ್ಯಪ್ಗೆ ಸಾಧ್ಯವಾಗಿಲ್ಲ. ಹೀಗಾಗಿ ಸೆಲ್ಫಿ ತೆಗೆದುಕೊಂಡು ಅನೇಕ ಬಾರಿ ಲಾಗಿನ್ ಆಗಲು ಯತ್ನಿಸಿದ್ದಾರೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಆತನ ಖಾತೆಯೇ ರದ್ದಾಗಿದೆ.
ಈ ಬಗ್ಗೆ ಮಾತನಾಡಿರುವ ಶ್ರೀಕಾಂತ್, ನನ್ನ ಪ್ರತಿಜ್ಞೆಯನ್ನು ನೆರವೇರಿಸಲು ತಿರುಪತಿಗೆ ಹೋಗಿದ್ದೆ. ನಾನು ಮುಡಿಯನ್ನು ಸಹ ನೀಡಿದೆ. ದರ್ಶನ ಮುಗಿಸಿ ಮರಳಿ ಬಂದಾಗ ಉಬರ್ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದೆ. ಆದರೆ, ನನ್ನ ಮುಖವನ್ನು ಗುರುತಿಸಲಿಲ್ಲ. ಹೀಗಾಗಿ ನನ್ನನ್ನು ಬ್ಲಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಾರನೇ ದಿನ ಉಬರ್ ಕಚೇರಿಗೆ ಮರು ನೋಂದಣಿಗೆ ತೆರಳಿದೆ. ಆದರೆ, ಮತ್ತೊಬ್ಬನನ್ನು ಚಾಲಕನಾಗಿ ನನ್ನ ಕಾರಿಗೆ ನೇಮಿಸಿಕೊಂಡರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಉಬರ್ ಅಧಿಕಾರಿಗಳು ಹೇಳಿದರು. ಆದರೆ, ಇನ್ನೊಬ್ಬ ಚಾಲಕನನ್ನು ಪಡೆಯಲು ನನ್ನಿಂದ ಸಾಧ್ಯವಾಗದು. ಸುಮಾರು 1 ತಿಂಗಳವರೆಗೆ ನಾನು ಉಬರ್ ಕಚೇರಿಗೆ ಅಲೆದಾಡಿದೆ. ಉನ್ನತ ಅಧಿಕಾರಿಗಳ ಜತೆ ಮಾತನಾಡುತ್ತೇನೆಂದರು. ಈ ಮೇಲ್ ವಿಳಾಸ ನೀಡಿದರು. ಆದರೆ, ಸಮಸ್ಯೆ ಬಗೆಹರಿದಿಲ್ಲ. ಮತ್ತೊಬ್ಬ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಹೇಳುತ್ತಿದ್ದಾರೆ ಎಂದು ಶ್ರೀಕಾಂತ್ ತಿಳಿಸಿದರು.
ಶ್ರೀಕಾಂತ್ ಸುಮಾರು ಒಂದೂವರೆ ವರ್ಷದಿಂದ ಉಬರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. 1428 ಪ್ರವಾಸಗಳಿಗೆ 4.67 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದಾರೆ. ಆದರೆ, ಇದೀಗ ಉಬರ್ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. (ಏಜೆನ್ಸೀಸ್)