ಗಂಡನ ವಯಸ್ಸು 45. ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಚಿಕ್ಕ ಕೆಲಸದಲ್ಲಿದ್ದುಕೊಂಡು ಜೀವನವನ್ನು ಹೇಗೋ ನಡೆಸಿಕೊಂಡು ಹೋಗುತ್ತಿದ್ದೆವು. ಈಗೆರಡು ವರ್ಷಗಳಿಂದ ಗಂಡ ಕೆಲಸಕ್ಕೆ ಹೋಗುವುದಿಲ್ಲ. ನಾನು ಬೆಳಗ್ಗೆ 7ಕ್ಕೆ ಮನೆ ಬಿಟ್ಟರೆ ಸಂಜೆ 6ಕ್ಕೆ ಮನೆ ಸೇರುತ್ತೇನೆ. ಶಾಲೆಯಿಂದ ಬರುವ ಮಕ್ಕಳ ಬಗ್ಗೆಯೂ ನನ್ನ ಗಂಡನಿಗೆ ಕಾಳಜಿಯಿಲ್ಲ.
ಅಡುಗೆ ಮಾಡಿಟ್ಟಿದ್ದರೂ ಒಮ್ಮೊಮ್ಮೆ ತಾವೂ ತಿನ್ನದೇ ಮಕ್ಕಳಿಗೂ ಕೊಡದೇ ಸುಮ್ಮನಿರುತ್ತಾರೆ. ಅವರ ಮುಂದೇ ಮಕ್ಕಳು ಜಗಳವಾಡುತ್ತಿದ್ದರೂ ಪ್ರತಿಕ್ರಯಿಸುವುದಿಲ್ಲ. ತುಂಬಾ ಕೋಪ ಬಂದರೆ ಮಕ್ಕಳಿಗೂ ಹೊಡೆಯುತ್ತಾರೆ. ಪ್ರತಿದಿನ ನಾನು ಮನೆಗೆ ಬರುವ ವೇಳೆಗೆ ಮನೆ ರಣರಂಗದಂತಿರುತ್ತದೆ. ಗಂಡನಿಗೆ ಬರೀ ಸೆಕ್ಸ್ ಫಿಲಂ ನೋಡುವ ಚಟ. ಒಮ್ಮೊಮ್ಮೆ ಮಧ್ಯ ರಾತ್ರಿಯೂ ಎದ್ದು ನೋಡುತ್ತಾರೆ. ಮಗಳು ಒಮ್ಮೊಮ್ಮೆ ಇಣುಕು ಹಾಕುತ್ತಾಳೆ. ನನಗಂತೂ ವಿಪರೀತ ಭಯ. ಗಂಡಸರು ಏನಾದರೂ ನೋಡಿಕೊಳ್ಳಲಿ ಎಂದರೆ ಇಷ್ಟು ಸಣ್ಣ ಹುಡುಗಿ ಇಂಥದ್ದನ್ನೆಲ್ಲಾ ನೋಡಿದರೆ ಅವಳ ಮನಸ್ಸು ಕೆಡುವುದಿಲ್ಲವೇ? ಮುಂದೆ ಮಗನೂ ಇದೇ ದಾರಿಹಿಡಿದರೆ ಎಂದೂ ಭಯ. ಮನೆಯಲ್ಲೇ ಇರೋಣವೆಂದರೆ ಅನ್ನಕ್ಕೂ ಕಲ್ಲು ಬೀಳುತ್ತದೆ. ಏನು ಮಾಡಲಿ?
ಉತ್ತರ: ನಿಮ್ಮ ಸಮಸ್ಯೆ ಗುರುತರವಾದದ್ದು. ‘ಏನೋ ಗಂಡಸರು ನೋಡಿಕೊಳ್ಳುತ್ತಾರೆ’ ಎಂದು ಉದಾಸೀನ ಮಾಡುವ ಹಾಗಿಲ್ಲ. ಪೋರ್ನೋಗ್ರಫಿ (ಅಶ್ಲೀಲ ಚಿತ್ರಗಳನ್ನು ಸದಾ ನೋಡುವುದು) ಎನ್ನುವುದು ಈಗ ವೇಗವಾಗಿ ಹರಡುತ್ತಿರುವ ಮಾನಸಿಕ ಕಾಯಿಲೆ. ಇದು ಗಂಡಸರಲ್ಲೂ, ಹದಿಹರೆಯದ ಮಕ್ಕಳಲ್ಲೂ ಹರಡುತ್ತಿದೆ. ಬಹಳ ವರ್ಷ ಹೆಂಡ ಕುಡಿಯುವ ಮತ್ತು ಡ್ರಗ್ಸ್ ತೆಗೆದುಕೊಳ್ಳುವ ಕಾಯಿಲೆಗಳ ಪರಿಣಾಮಕ್ಕಿಂತಲೂ ಇದು ಭೀಕರ.
ಈ ಚಟಕ್ಕೆ ಬಲಿಯಾದವರಿಗೆ ಹಾಗೂ ಅವರ ಕುಟುಂಬದವರಿಗೆ ಈ ಮೂಲಕ ಹೇಳುವುದು ಇಷ್ಟೇ: ಇಂಥ ವ್ಯಕ್ತಿಗಳಿಗೆ ಪ್ರಾರಂಭದಲ್ಲಿಯೇ ಶುಶ್ರೂಷೆ ಕೊಡಿಸಿ ವ್ಯಕ್ತಿಯನ್ನು ದುರಂತದಿಂದ ಪಾರು ಮಾಡಬೇಕು. ವ್ಯಕ್ತಿಯ ಬದುಕು ಎನ್ನುವುದು ಅವನ ನಾಲ್ಕು ಆಯಾಮಗಳ ಕ್ಷೇತ್ರಗಳಲ್ಲಿ ಮಾನಸಿಕವಾಗಿ ಕೆಲಸ ಮಾಡುತ್ತಾ ಅದಕ್ಕೆ ಶರೀರವೂ ಸ್ಪಂದಿಸುತ್ತಾ ಅವನನ್ನು ಮುನ್ನಡೆಸುತ್ತದೆ. ಅವುಗಳ ವಿವರ ಹೀಗಿದೆ.
1) ವೈಯಕ್ತಿಕ : ಮನುಷ್ಯ ತನ್ನ ದೇಹವನ್ನೂ ಮನಸ್ಸನ್ನೂ ಶುಚಿಯಾಗಿ ಇಟ್ಟುಕೊಂಡಿರಬೇಕು. ದೇಹಕ್ಕೆ ಕಾಲದಿಂದ ಕಾಲಕ್ಕೆ ತಕ್ಕ ಆಹಾರ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕವಾದ ಚಿಂತನೆಗಳು, ಕರುಣೆ ತ್ಯಾಗ ಮುಂತಾದ ಉದಾತ್ತ ಗುಣಗಳು ಇದ್ದರೆ ಆ ವ್ಯಕ್ತಿಯ ಬದುಕು ಸುಗಮವಾಗಿರುತ್ತದೆ.
2) ಕೌಟುಂಬಿಕ: ಹೆಣ್ಣು ಮತ್ತು ಗಂಡು ತಮ್ಮ ಕುಟುಂಬವನ್ನು ಪ್ರೀತಿಸಬೇಕು ಮತ್ತು ಅದಕ್ಕಾಗಿ ಶ್ರಮಿಸಬೇಕು. ಮಕ್ಕಳನ್ನು ಹುಟ್ಟಿಸುವುದಷ್ಟೇ ಅಲ್ಲ, ಅವರ ಏಳಿಗೆಗಾಗಿ ಕೈಲಾದ್ದನ್ನು ಮಾಡಬೇಕು.
3) ಸಾಮಾಜಿಕ: ಮನುಷ್ಯ ದೂರದಲ್ಲೆಲ್ಲೋ ಒಂಟಿಮನೆಯನ್ನು ಮಾಡಿಕೊಂಡು ಬದುಕುವುದಕ್ಕಾಗುವುದಿಲ್ಲ. ನೆಂಟರು, ಇಷ್ಟರು, ಅಕ್ಕಪಕ್ಕದ ಮನೆಯವರು, ಇವರೆಲ್ಲರೂ ಗೌರವಿಸುವಂತೆ ಬಾಳಬೇಕಾಗುತ್ತದೆ. ಆದ್ದರಿಂದ ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎನ್ನುವ ಪರಿವೇಚನೆ ಇರಬೇಕಾಗುತ್ತದೆ. ನಾನು ಹೀಗೆ ಮಾಡಿದರೆ ಜನ ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎನ್ನುವ ಸೂಕ್ಷ್ಮ ತಿಳಿವಳಿಕೆ ಇರಬೇಕಾಗುತ್ತದೆ.
4) ನೈತಿಕತೆ: ಇದು ಬಹಳ ಮುಖ್ಯವಾದದು. ಮನುಕುಲ ಇಷ್ಟು ಸಹಸ್ರವರ್ಷಗಳು ನಡೆದು ಬಂದಿರುವುದೇ ಮನುಷ್ಯ ತಾನೇ ರೂಪಿಸಿಕೊಂಡಿರುವ ನೀತಿಯ ಆಧಾರದ ಮೇಲೆ. ದೇವರು, ಪಾಪ, ಪುಣ್ಯ, ಈ ಎಲ್ಲಾ ಪರಿಕಲ್ಪನೆಗಳನ್ನು ಮಾಡಿರುವುದೂ ಮನುಷ್ಯ ನೀತಿವಂತನಾಗಿ, ತನ್ನಲ್ಲಿರುವ ರಾಕ್ಷಸತನವನ್ನು , ಅದರೊಂದಿಗೇ ಬರುವ ಸ್ವಾರ್ಥವನ್ನೂ ಹೋಗಲಾಡಿಸಿಕೊಂಡು ಕೇವಲ ಒಳ್ಳೆಯ ಮಾನವನಾಗಿ ಬದುಕಬೇಕೆಂಬ ಸಂದೇಶವನ್ನು ವಿಶ್ವದ ಎಲ್ಲಾ ಧರ್ಮಗಳೂ ಸಾರುತ್ತಿವೆ.
ಈ ಪೋರ್ನೋಗ್ರಫಿಯ ಚಟ ಮೊದಲು ನಾಶ ಮಾಡುವುದೇ ಮನುಷ್ಯನಲ್ಲಿರುವ ನೈತಿಕತೆಯನ್ನು. ಕಂಡವರ ಗುಪ್ತಾಂಗಗಳನ್ನು ನೋಡಿ ಸುಖಿಸುವ ಮನುಷ್ಯ ಪ್ರಾಣಿಗಳಿಗಿಂತಲೂ ಕೀಳಾಗುತ್ತಾನೆ. ಎರಡನೆಯದಾಗಿ ಅವನ ಸಾಮಾಜಿಕ ಬದುಕು ಇದರಿಂದ ನಾಶವಾಗುತ್ತದೆ. ಅವನಿಗೂ ಸಮಾಜ ಬೇಡ, ಸಮಾಜಕ್ಕೂ ಅವನು ಬೇಡವಾಗುತ್ತಾನೆ. ಮೂರನೆಯದು ಕುಟುಂಬಕ್ಕೆ ಹೊರೆಯಾಗುತ್ತಾನೆ. ನಾಲ್ಕನೆಯದಾಗಿ ಕೊನೆಗೆ ತನಗೆ ತಾನೇ ಹೊರೆಯಾಗುತ್ತಾನೆ. ಬದುಕಿದ್ದೂ ಸತ್ತವನಂತಾಗುತ್ತಾನೆ. ಹೇಗೆಂದರೆ ಸತತವಾಗಿ ಅಶ್ಲೀಲವನ್ನು ನೋಡುವುದರಿಂದ ಮಿದುಳಿನ ನರಮಂಡಲಗಳು ಮೊದಲು ಮೊದಲು ಉದ್ರೇಕಗೊಳ್ಳುತ್ತವೆ. ಈ ಅತಿಯಾದ ಉದ್ರೇಕದಿಂದದಿಂದ ಮಿದುಳು ತನ್ನ ಇತರ ಕೆಲಸಗಳಾದ ನೆನಪಿನ ಶಕ್ತಿ, ಎದುರಿಗೆ ಕಾಣಿಸಿಕೊಳ್ಳುತ್ತಿರುವ ಘಟನೆಗಳಿಗೆ, ತನ್ನ ಭಾವನೆಗಳನ್ನು ಜೋಡಿಸಿಕೊಳ್ಳುವ ವಾಸ್ತವಿಕ ಪ್ರಜ್ಞೆ, ತನ್ನದೇ ಶರೀರದ ಹಸಿವು, ನಿದ್ರೆ, ನೀರಡಿಕೆ ಇವುಗಳನ್ನು ಕಳೆದುಕೊಳ್ಳುತ್ತಾನೆ. ಕ್ರಮೇಣ ಮಿದುಳು ನಿಷ್ಕಿಯವಾಗುತ್ತಾ ಹೋಗುತ್ತದೆ. ಯೋಚಿಸುವ ಶಕ್ತಿ ಎಂದೋ ಕಳೆದು ಹೋಗಿರುತ್ತದೆ. ಕಡೆಗೆ ಕೈಕಾಲುಗಳ ನರಮಂಡಲಗಳೂ ನಶಿಸಿ ಕುಳಿತಲ್ಲೇ ಕುಳಿತು ಉಸಿರು ಮಾತ್ರ ಆಡುತ್ತಿರುವ ವೆಜಿಟಬಲ್ ಆಗಿಬಿಡುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗೆಂದು ಅಞಛ್ಟಿಜ್ಚಿಚ್ಞ ಟಠಢ್ಚಜಜಿಚಠ್ಟಿಜ್ಚಿ ಅಠಠಟ್ಚಜಿಚಠಿಜಿಟ್ಞ ತನ್ನ ಸಂಶೋಧನೆಯ ಮುಖಾಂತರ ತಿಳಿಸಿದೆ. ಈ ಸಂಸ್ಥೆ 2015 ರಿಂದ ಇಂಥಾ ಸಾವಿರಾರು ಪ್ರಕರಣಗಳನ್ನು ಅಧ್ಯಯನ ಮಾಡಿದೆ. ಈ ಮಾರಿ ಚಟವೀಗ ಭಾರತದಲ್ಲೂ ಹರಡುತ್ತಿದೆ.
ಇದಕ್ಕೆ ಎಚ್ಚರವನ್ನು ಪ್ರಾರಂಭಿಕ ಹಂತದಲ್ಲೇ ಮನೆಯವರು ವಹಿಸಬೇಕು. ತಕ್ಷಣ ಸೂಕ್ತ ಮನೋವೈದ್ಯರ ಹತ್ತಿರ ಕರೆದೊಯ್ಯಬೇಕು. ಸರಿಯಾದ ಔಷಧಿ ಮತ್ತು ಥೆರಪಿಗಳನ್ನು ಕೊಡಿಸಬೇಕು. ಸಮಾಜವೂ ಅದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಶಾಲೆ ಕಾಲೇಜುಗಳಲ್ಲಿ ಲೈಂಗಿಕ ತಜ್ಞ ವೈದ್ಯರನ್ನು ತಿಂಗಳಿಗೊಮ್ಮೆ ಕರೆಸಿ ಮಕ್ಕಳಲ್ಲಿ ಆರೋಗ್ಯಕರ ಲೈಂಗಿಕ ಬದುಕಿನ ಬಗ್ಗೆ ತಿಳಿವಳಿಕೆಯನ್ನು ಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಮೂಹ ಮಾಧ್ಯಮದ ನಿಯಂತ್ರಣವನ್ನು ಸರ್ಕಾರ, ಸಾಮಾಜಿಕ ಕಳಕಳಿಯುಳ್ಳ ಮೇಧಾವಿಗಳಿಗೆ ಒಪ್ಪಿಸಿ ಆರೋಗ್ಯಕರ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಈ ಪತ್ರ ಬರೆದಿರುವ ನೀವೂ ಸಹ ನಿಮ್ಮ ಗಂಡನನ್ನು ಆದಷ್ಟು ಬೇಗ ಮನೋವೈದ್ಯರಿಗೆ ತೋರಿಸಿ. ಅವರಿಗೆ ಈಗಾಗಲೇ ಹಲವು ತೊಂದರೆಗಳು ತಲೆಹಾಕಿವೆ. ನಿಮ್ಮದೇ ಪತ್ರದಲ್ಲಿರುವ ನಿಮ್ಮ ಮಾತುಗಳನ್ನು ಗಮನಿಸಿ. ಮಕ್ಕಳು ಜಗಳವಾಡುತ್ತಿದ್ದರೂ ನಿಮ್ಮ ಗಂಡನಿಗೆ ಗಮನವಿಲ್ಲ, ತಮಗೇ ಹಸಿವಾದರೂ ತಿನ್ನುವುದಿಲ್ಲ, ಮಕ್ಕಳಿಗೂ ಊಟ ಬಡಿಸುವುದಿಲ್ಲ, ಈ ಎಲ್ಲ ಅವರ ನಿಷ್ಕಿ ›ಯತೆಗಳು ಅವರ ಮೆದುಳಿನ ನರಮಂಡಲಗಳು ನಿರುಪಯೋಗಿಯಾಗುತ್ತಿರುವುದನ್ನು ಸೂಚಿಸುತ್ತಿವೆ. ಈಗಲೇ ಎಚ್ಚೆತ್ತುಕೊಳ್ಳಿ. ಮೊದಲು ವೈದ್ಯರ ಬಳಿಕರೆದುಕೊಂಡು ಹೋಗಿ. ಕಾಲ ಮಿಂಚಿಲ್ಲ. ನಿಧಾನವಾಗಿ ಅವರ ಈ ದುಶ್ಚಟ ದೂರವಾಗಬಹುದು. ಆದರೆ ಅದಕ್ಕಾಗಿ ನೀವು ಸಹನೆಯಿಂದ ಕಾಯಬೇಕಾಗುತ್ತದೆ ಅಷ್ಟೆ.
ಡಾ.ಶಾಂತಾ ನಾಗರಾಜ್ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…
ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?
ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?