More

    ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

    ಒಂದೆಡೆ ಪ್ರೀತಿಯ ಹುಡುಗ... ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ... ಗೊಂದಲದ ಮನಕೆ ದಾರಿ ತೋರಿ ಮೇಡಂ...ನಾನು ಎರಡನೇ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ತಂದೆತಾಯಿ ಮತ್ತು ಅಣ್ಣ ಯಾರಿಗೂ ನನ್ನನ್ನು ಕಂಡರೆ ಇಷ್ಟವಿಲ್ಲ. ಒಂದು ಸಣ್ಣ ತಪ್ಪು ಮಾಡಿದರೂ ತಂದೆ ಹೊಡೆಯುತ್ತಾರೆ. ಮುಖಕ್ಕೆ ಉಗಿಯುತ್ತಾರೆ. ತಾಯಿಯೂ ಅವರಿಗೇ ಸಪೋರ್ಟ್ ಮಾಡುತ್ತಾರೆ. ಅಣ್ಣ ನನ್ನನ್ನು ಮಾತಾಡಿಸುವುದೇ ಇಲ್ಲ. ಹೆಣ್ಣಿನ ಬಗ್ಗೆ ಈ ಮೂರುಜನಕ್ಕೂ ತುಂಬ ತಾತ್ಸಾರ. ನನ್ನ ಗೆಳತಿಯ ತಾಯಿ ಒಮ್ಮೆ ನಮ್ಮ ಮನೆಗೆ ಬಂದಾಗ ‘ನಿಮ್ಮ ಮಗಳಿಗೆ ಯಾವಾಗ ಮದುವೆ ಮಾಡುತ್ತೀರಿ?’ ಎಂದು ನಮ್ಮಮ್ಮ ಕೇಳಿದರು. ಅದಕ್ಕೆ ಅವರು ‘ನಮಗೇನೋ ಅವಳ ಪದವಿ ಮುಗಿದ ತಕ್ಷಣ ಮದುವೆ ಮಾಡಬೇಕೆಂದು ಆಸೆ. ಆದರೆ ನನ್ನ ಮಗಳು ಇನ್ನೂ ಮುಂದೆ ಓದುತ್ತೇನೆ, ಈಗಲೇ ಮದುವೆಯಾಗುವುದಿಲ್ಲ ಎನ್ನುತ್ತಿದ್ದಾಳೆ’ ಎಂದರು. ಅದಕ್ಕೆ ನಮ್ಮ ತಂದೆ ‘ಕೋಳಿಯನ್ನು ಕೇಳಿ ಯಾರಾದರೂ ಸಾಂಬಾರ ಅರೆಯುತ್ತಾರೆಯೇ? ನೀವು ಹೆಚ್ಚು ಓದಿಸಲು ಹೋಗಬೇಡಿ, ಪದವಿ ಮುಗಿದತಕ್ಷಣ ಮದುವೆ ಮಾಡಿ’ ಎಂದರು.

    ಇದು ನನಗೂ ಕೊಟ್ಟಿರುವ ಹಿಂಟ್ ಮೇಡಂ. ನನಗೆ ಬಿಕಾಂ ಮುಗಿದ ಮೇಲೆ ಸಿ.ಎ ಮಾಡುವ ಆಸೆಯಿದೆ. ಅಲ್ಲದೆ, ನಾನು ಒಬ್ಬ ಅನ್ಯಧರ್ಮದ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನಿಗಾಗಿ ನನ್ನ ಮನವನ್ನು ಅರ್ಪಿಸಿಕೊಂಡಿರುವೆ. ಇದು ಅಣ್ಣನಿಗೆ ಗೊತ್ತಾಗಿ ಅವನು ನನ್ನಿಂದ ‘ಇನ್ನು ಮುಂದೆ ಹೀಗೆಲ್ಲ ಮಾಡುವುದಿಲ್ಲ’ ಎಂದು ಮನೆದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದ್ದಾನೆ. ಆದರೆ ನಾನು ಆ ಹುಡುಗನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ. ಮನೆಬಿಟ್ಟು ಓಡಿ ಹೋಗಿ ಮದುವೆಯಾಗಲು ಇಷ್ಟವಿಲ್ಲ. ನನ್ನ ಹುಡುಗನ ಮನೆಯಲ್ಲಿ ಅನೇಕ ತೊಂದರೆಗಳಿವೆ. ಅವನ ಅಕ್ಕನಿಗೆ ಇನ್ನೂ ಮದುವೆಯಾಗಿಲ್ಲ. ತಮ್ಮ-ತಂಗಿಯರು ಇನ್ನೂ ಓದುತ್ತಿದ್ದಾರೆ. ಆದ್ದರಿಂದ ಅವನು ಇನ್ನೂ ನಾಲ್ಕು ವರ್ಷ ತನಗಾಗಿ ಕಾಯಬೇಕೆಂದು ಹೇಳುತ್ತಿದ್ದಾನೆ. ಮನೆಯಲ್ಲಿ ಈ ಸುದ್ದಿ ತಿಳಿದರೆ ನನ್ನನ್ನು ಕೊಂದೇ ಹಾಕಿಬಿಡುತ್ತಾರೆ. ನನಗೆ ತುಂಬ ಆಸೆ. ಇನ್ನೂ ಓದಬೇಕು. ಒಳ್ಳೇ ಕೆಲಸಕ್ಕೆ ಸೇರಿ ಅಮ್ಮ ಅಪ್ಪನಿಗೆ ಕೀರ್ತಿ ತರಬೇಕು. ಅವರನ್ನು ಕಡೆತನಕ ಸಾಕಬೇಕು.
    ಹುಡುಗನ ಬಗ್ಗೆ ಅವರಿಗೆ ಹೇಳಿ ಏನಾದರೂ ಮಾಡಿ ಅವರನ್ನು ಒಪ್ಪಿಸಿಯೇ ಮದುವೆಯಾಗಬೇಕು…ಹೀಗೇ ಇನ್ನೂ ಏನೇನೋ. ಈಗ ನೋಡಿದರೆ ಮನೆಯ ಚಿಂತೆ, ಆ ಹುಡುಗನ ಚಿಂತೆಯಲ್ಲಿ ಏನು ಓದಿದರೂ ತಲೆಗೆ ಹತ್ತುವುದೇ ಇಲ್ಲ. ನಾನೇನು ಓದಿನಲ್ಲಿ ಹೆಚ್ಚು ಮುಂದೆ ಇಲ್ಲ. ಆದರೆ ಓದಲೇಬೇಕೆಂಬ ಛಲವಿದೆ. ನನಗೆ ಈ ಪದವಿ ಮುಗಿಯುವ ಹೊತ್ತಿಗೆ ನನ್ನನ್ನು ಕೇಳದೇ ಯಾರದೋ ಜತೆಯಲ್ಲಿ ಮದುವೆ ಫಿಕ್ಸ್ ಮಾಡಿಬಿಡುತ್ತಾರೆನ್ನುವ ಭಯ. ತಂದೆತಾಯಿಯ ಬಗ್ಗೆಯೂ ಅಪಾರವಾದ ಪ್ರೀತಿ ಮತ್ತು ಗೌರವಗಳಿವೆ. ಹಾಗೇ ಆ ಹುಡುಗನ ಬಗ್ಗೆಯೂ ಪ್ರೀತಿಯಿದೆ. ಇಬ್ಬರನ್ನೂ ಬಿಟ್ಟಿರಲಾರೆ. ಏನು ಮಾಡಲಿ ತಿಳಿಸಿ.

    ಉತ್ತರ: ನೀವು ಬದುಕನ್ನು ತುಂಬ ಗೋಜಲು ಮಾಡಿಕೊಂಡಿದ್ದೀರಿ. ಯಾವುದನ್ನು ತಪ್ಪಿಸಬೇಕೆಂದು ಹೆತ್ತವರು ನಿಮ್ಮನ್ನು ಕಟ್ಟುನಿಟ್ಟಾಗಿ ಸಾಕಿದ್ದರೋ ಅದನ್ನು ತಪ್ಪಿಸಲಾಗಿಲ್ಲವೆನ್ನುವ ಕೊರಗು, ಅವರು ನಿಮ್ಮ ಬಗ್ಗೆ ಕ್ರೂರವಾಗಿ ನಡೆದುಕೊಳ್ಳುವಂತೆ ಮಾಡುತ್ತಿದೆ. ಮೂರುವರ್ಷಗಳಿಂದ ನೀವು ಪ್ರೀತಿಯಲ್ಲಿ ಬಿದ್ದು, ಅದು ಅಣ್ಣನಿಗೂ ತಿಳಿದು, ನಿಮ್ಮ ತಂದೆತಾಯಿಗೆ ಮಾತ್ರ ಗೊತ್ತಿಲ್ಲವೆಂದುಕೊಂಡಿರಾ? ಖಂಡಿತ ಗೊತ್ತಾಗಿದೆ. ಅಲ್ಲದೆ ತುಂಬ ಹತಾಶರೂ ಆಗಿದ್ದಾರೆ. ಆದ್ದರಿಂದಲೇ ಅವರು ನಿಮ್ಮ ಜತೆಗೆ ಅಷ್ಟೊಂದು ಮೃಗೀಯವಾಗಿ ವರ್ತಿಸುತ್ತಿದ್ದಾರೆ.

    ನಿಮಗೆ ಈಗ 19 ಅಥವಾ 20 ವರ್ಷ ವಯಸ್ಸಿರಬಹುದು. ಆದರೆ ಇನ್ನೂ ಐದು ವರ್ಷದ ಹುಡುಗಿಯಂತೆ ಯೋಚನೆ ಮಾಡುತ್ತಿದ್ದೀರಿ. ‘ನನ್ನ ಹತ್ತಿರ ಇರುವ ಹಣವೂ ಖರ್ಚಾಗಬಾರದು, ಚಾಕೋಲೇಟನ್ನೂ ಕೊಂಡುಕೊಳ್ಳಬೇಕು’ ಎಂದು ಯೋಚಿಸುವ ಮಗುವಿನಂತಿದೆ ನಿಮ್ಮ ಯೋಚನಾಲಹರಿ. ‘ನಾನು ಸಿ.ಎ ಅನ್ನು ಯುಎಸ್​ಎ ಅಥವಾ ಇಟಲಿಯಲ್ಲಿ ಓದಿ ಅಪ್ಪನಿಗೆ ಒಳ್ಳೆಯ ಹೆಸರು ತರಬೇಕು’ ಎಂದು ಕನಸು ಕಾಣುತ್ತಿದ್ದೀರಲ್ಲ? ಅದಕ್ಕೆ ಬಿಕಾಂನಲ್ಲಿ ಅತ್ಯಂತ ಒಳ್ಳೆಯ ಅಂಕಗಳು ಬರಬೇಕು ಎನ್ನುವ ಪ್ರಥಮ ತಿಳಿವಳಿಕೆ ನಿಮಗೆ ಇರಬೇಕು ಅಲ್ಲವೇ? ‘ಅಟ್ಟಕ್ಕೂ ಹತ್ತಲಾರದವ ಬೆಟ್ಟದ ಕನಸು ಕಂಡಂತೆ’ ಎನ್ನುವ ಗಾದೆಯಿದೆ ಕನ್ನಡದಲ್ಲಿ. ಹಾಗಾಯಿತು ನಿಮ್ಮ ಕಥೆ. ಸರಿಯಾಗಿ ಓದುವ ಸಮಯದಲ್ಲಿ ಗುರಿಯ ಕಡೆ ಗಮನವಿಲ್ಲದೇ ಏನೇನೋ ಕಥಾಂತರ ಮಾಡಿಕೊಂಡಿದ್ದೀರಿ. ಈಗ ಸಿಎ, ಪರದೇಶ ಅಂತೆಲ್ಲ ಕನವರಿಸುತ್ತಿದ್ದೀರಿ. ನಿಮಗೆ ಈಗ ಮೂರು ದಾರಿಗಳಿವೆ.

    ನಿಮ್ಮ ವಯಸ್ಸು 18 ದಾಟಿರುವುದರಿಂದ ಕಾನೂನಿನ ಪ್ರಕಾರ ನೀವು ಯಾರನ್ನು ಬೇಕಾದರೂ ಮದುವೆಯಾಗಬಹುದು. ಎಲ್ಲರನ್ನೂ ಮೆಚ್ಚಿಸುತ್ತೇನೆ ಎನ್ನುವ ಹುಂಬತನ ಬಿಟ್ಟು ಮನೆಬಿಟ್ಟು ಹೋಗಿ ನಿಮ್ಮ ಹುಡುಗನನ್ನು ಮದುವೆಯಾಗಿ. ಆದರೆ ಅವನೇ ಮದುವೆಗೆ ತಯಾರಿಲ್ಲ. ಅವನಿಗೆ ಮದುವೆಯಾಗಲು ಇನ್ನೂ ನಾಲ್ಕು ವರ್ಷಗಳು ಬೇಕು ಎಂದು ನೀವೇ ಪತ್ರದಲ್ಲಿ ಬರೆದಿದ್ದೀರಲ್ಲ? ಇದು ಸಾಧ್ಯವೇ ಎಂದು ಚಿಂತಿಸಿ. ಎರಡನೇ ದಾರಿ-‘ಓದಲು ಬೇಕಾದರೆ ಮನೆಬಿಟ್ಟು ಓಡಿ ಹೋಗುತ್ತೇನೆ’ ಎಂದು ನೀವೇ ಬರೆದಿರುವಂತೆ ಮನೆಬಿಟ್ಟು ಹೋಗಿ ನಿಮ್ಮ ವಿದ್ಯೆಯನ್ನು ಮುಂದುವರಿಸಿ. ಆದರೆ ಸಿಎ ಓದಲು ಪ್ರವೇಶಧನ, ಪುಸ್ತಕಗಳು ಎಲ್ಲಕ್ಕೂ ತುಂಬ ಹಣ ಬೇಕಾಗುತ್ತದೆ. ಅದನ್ನು ಹೇಗೆ ಹೊಂದಿಸುವುದೆಂದು ಯೋಚನೆ ಮಾಡಿದ್ದೀರಾ? ಈ ಬಗ್ಗೆಯೂ ಚಿಂತಿಸಿ. ಇನ್ನು ಮೂರನೇ ದಾರಿ-ಹೇಗೋ ಪದವಿ ಮುಗಿಸಿ ಅಪ್ಪ-ಅಮ್ಮ ಯಾರನ್ನು ಆರಿಸುತ್ತಾರೋ ಅವರನ್ನು ಮದುವೆಯಾಗಿ. ಅಪ್ಪ, ಅಮ್ಮ ನಿಮ್ಮ ಶತ್ರುಗಳೇನಲ್ಲ.

    ಸರಿಯಾದವರನ್ನೇ ಆರಿಸುತ್ತಾರೆ. ನಿಮ್ಮ ಆಯ್ಕೆಯಾಗಿರುವ ಪರಧರ್ವಿುೕಯನನ್ನು ಮದುವೆಯಾಗುವುದು ಹಾಗೂ ಸಿಎ ಓದುವುದು ಎರಡು ವಿಚಾರದಲ್ಲೂ ದೋಷವಿದೆ. ಆ ಪರಧರ್ವಿುೕಯ ತಾನೇ ಬಡತನದಲ್ಲಿ ಬೇಯುತ್ತಿದ್ದಾನೆ. ಅಕ್ಕನ ಮದುವೆ, ತಮ್ಮ-ತಂಗಿಯರ ಓದು ಎಂದು ಹಲವು ಸಿಕ್ಕುಗಳಲ್ಲಿ ಸಿಕ್ಕಿದ್ದಾನೆ. ಇನ್ನು ಸಿಎ ಓದಲು ಹಣದ ಬಗ್ಗೆಯೇ ನೀವು ಚಿಂತಿಸಿಲ್ಲ. ಅಂದರೆ, ಚಿಂತನೆ ದೋಷಪೂರ್ಣವಾಗಿದೆ ಎಂದು ಅರ್ಥ ತಾನೆ? ಅದಕ್ಕೇ ಹೇಳುವುದು, ಯಾವ ವಿಚಾರದ ಬಗ್ಗೆಯೇ ಆಗಲಿ, ವಾಸ್ತವದ ನೆಲೆಗಟ್ಟಿನಲ್ಲಿಯೇ ಯೋಚಿಸಬೇಕು.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?

    ಮೊಮ್ಮಕ್ಕಳಾದ ಕಾಲಕ್ಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ- ಈ ಇಳಿವಯಸ್ಸಲ್ಲಿ ಎಲ್ಲಿ ಹೋಗಲಿ?

    ಪತ್ನಿ ಸರಿಯಿಲ್ಲ ಎಂದು ಕಣ್ಣೀರುಹಾಕಿ ಸಂಬಂಧ ಬೆಳೆಸಿದ- ಎಲ್ಲವನ್ನೂ ಒಪ್ಪಿಸಿ ಮೋಸ ಹೋದೆ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts