More

    ಮಗ ಸುಂದರ ಆಗಿರೋದೇ ತಪ್ಪಾಗಿಬಿಟ್ಟಿದೆ ಮೇಡಂ… ಅಹಂ ಮಿತಿಮೀರಿದೆ- ಸರಿ ದಾರಿಗೆ ತರೋದು ಹೇಗೆ?

    ಮಗ ಸುಂದರ ಆಗಿರೋದೇ ತಪ್ಪಾಗಿಬಿಟ್ಟಿದೆ ಮೇಡಂ... ಅಹಂ ಮಿತಿಮೀರಿದೆ- ಸರಿ ದಾರಿಗೆ ತರೋದು ಹೇಗೆ?ಪ್ರಶ್ನೆ : ನಮಗೆ ವಯಸ್ಸಾಗಿದೆ ಮೇಡಂ. ಮಗನದ್ದೇ ಚಿಂತೆ. ಅವನು ಬಾಲ್ಯದಿಂದಲೂ ತುಂಬಾ ಚೆನ್ನಾಗಿ ಓದುತ್ತಿದ್ದ. ಸರ್ಕಾರಿ ಮಾಧ್ಯಮ ಶಾಲೆಯ ಉಪಾಧ್ಯಾಯನಾದ ನಾನು ನನ್ನ ಶಕ್ತಿ ಮೀರಿ ಮಕ್ಕಳನ್ನು ಓದಿಸಿದೆ. ಮಗ ಬಿ.ಇ ಮಾಡಿ ಅಮೆರಿಕದಲ್ಲಿ ಎಂ.ಎಸ್ ಮಾಡಿ ಅಲ್ಲೇ ಎಂಟು ವರ್ಷ ಕೆಲಸವನ್ನೂ ಮಾಡಿದ. ಅಲ್ಲಿ ಅವನಿಗೆ ಒಳ್ಳೆಯ ಕೆಲಸ ಮತ್ತು ಒಳ್ಳೆಯ ವೇತನ ಇತ್ತು.

    ನಾವು ಅವನಿಗೆ 27 ವರ್ಷವಾದಾಗ ಮದುವೆಯಾಗುವಂತೆ ಬಲವಂತ ಮಾಡಿದೆವು. ಅವನೂ ಒಪ್ಪಿ ಎರಡು ವರ್ಷಕ್ಕೆ ಒಮ್ಮೆ ಇಲ್ಲಿಗೆ ಬಂದಾಗ ಹಲವು ಹುಡುಗಿಯರನ್ನು ನೋಡಿ ಒಬ್ಬೊಬ್ಬರಲ್ಲಿ ಒಂದೊಂದು ಅವಗುಣಗಳನ್ನು ಎಣಿಸಿ ತಿರಸ್ಕರಿಸಿಬಿಟ್ಟ. ಅವನು ನೋಡಲು ತುಂಬಾ ಸುಂದರನಾಗಿದ್ದಾನೆ. ತನ್ನದೇ ಜಾಣತನದಿಂದ ತನ್ನ ಉದ್ಯೋಗದಲ್ಲಿ ಬಹಳ ಮೇಲೆ ಬಂದುಬಿಟ್ಟ. ಇವೆರಡರ ಅಹಂಕಾರ ಅವನ ತಲೆಗೇರಿ ವಧುಪರೀಕ್ಷೆಗೆ ಬಂದ ಹುಡುಗಿಯರನ್ನು ಗತ್ತಿನಿಂದಲೇ ಮಾತಾಡಿಸಿ, ಅವರ ಮುಖಕ್ಕೇ ಹೊಡೆದಂತೆ ” ನೀವು ನನಗೆ ಹೊಂದುವುದಿಲ್ಲ ” ಎಂದು ಹೇಳಿ ಅವಮಾನ ಮಾಡಿಬಿಡುತ್ತಿದ್ದ.

    ನಮ್ಮ ಜಾತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದೆ. ಇವನೋ 25-30 ಹುಡುಗಿಯರನ್ನು ತಿರಸ್ಕರಿಸಿದ್ದರಿಂದ ನಮ್ಮ ನೆಂಟರಿಷ್ಟರು, ಪರಿಚಿತರು ಹುಡುಗಿಯರನ್ನು ಪ್ರಪೋಸ್ ಮಾಡುವುದಕ್ಕೂ ಮತ್ತು ಹೆಣ್ಣು ಮಕ್ಕಳ ತಂದೆತಾಯಿಯರು ತಮ್ಮ ಮಗಳನ್ನು ತೋರಿಸುವುದಕ್ಕೂ ಹಿಂಜೆರೆದರು. ಇದು ಸಹಜವೂ ಬಿಡಿ. ಯಾರು ತಾನೆ ಮನೆಬಾಗಿಲಿಗೆ ಬಂದು ಅವಮಾನ ಮಾಡಿಸಿಕೊಳ್ಳಲು ಇಷ್ಟಪಡುತ್ತಾರೆ.
    ನಾವೂ ಹೀಗೆಲ್ಲಾ ಮಾಡಬೇಡವೆಂದು ಎಷ್ಟೆಷ್ಟೋ ಹೇಳಿದೆವು. ಕೇಳಲಿಲ್ಲ. ಈ ಮಧ್ಯೆ ಭಾರತದಲ್ಲಿ ನೆಲೆಗೊಂಡ ಜಪಾನ್ ಕಂಪನಿಯೊಂದು ಇವನ ಪ್ರೊಫೈಲನ್ನು ಇಂಟರ್ ನೆಟ್ಟಿನಲ್ಲಿ ನೋಡಿ ಮೆಚ್ಚಿ, ಅದರ ಅಧಿಕಾರಿಯೊಬ್ಬರು ಅಮೆರಿಕಕ್ಕೆ ಇವನಿರುವಲ್ಲಿಗೆ ಹೋಗಿ ಇವನನ್ನು ಮಾತನಾಡಿಸಿ ಸಂದರ್ಶನ ಮಾಡಿ, ಇವನು ಕೇಳಿದ ವೇತನ ಕೊಡುವ ಭರವಸೆ ನೀಡಿದ್ದರಿಂದ ನಾವಿರುವ ಬೆಂಗಳೂರಿನಲ್ಲೇ ಅತ್ಯಂತ ಉನ್ನತ ಹುದ್ದೆಗೆ ಬಂದ. ನಮಗೂ ತುಂಬಾ ಖುಷಿಯಾಯಿತು. ಬಂದವನೇ ತನ್ನ ವೇತನಕ್ಕೂ ಮೀರಿದ ಖರ್ಚು ಮಾಡಿ, ಬ್ಯಾಂಕಿನಲ್ಲಿ ಸಾಲವನ್ನೂ ಪಡೆದು ಆರು ಬೆಡ್‍ರೂಂಗಳ ಐಷಾರಾಮಿ ಮನೆಕಟ್ಟಿದ.

    ನಮ್ಮ ಪುಟ್ಟ ಮನೆಯನ್ನು ಬಾಡಿಗೆಗೆ ಕೊಟ್ಟು ನಾವೂ ಅವನ ಜತೆ ಇರುವುದಕ್ಕೆ ಪ್ರಾರಂಭಿಸಿದೆವು. ಆಗ ಅವನಿಗೆ 38 ವರ್ಷಗಳಾಗಿ ಹೋಗಿದ್ದವು. ಮತ್ತೆ ಮದುವೆ ಮಾಡಲು ಪ್ರಯತ್ನಿಸಿದೆವು. ಈಗೊಂದು ತೊಂದರೆ ಎದುರಾಯಿತು. ಅವನಿಗೆ 38 ವರ್ಷಗಳಾಗಿದ್ದರೂ ನೋಡಲು 26ರಂತೆ ಚೆಲುವನಾಗಿಯೇ ಇದ್ದ. ಆದರೆ ಬಂದ ಹುಡುಗಿಯರು 33-34 ವರ್ಷದವರಾದ ಕಾರಣ ಸ್ವಲ್ಪ ದಪ್ಪವಾಗಿ, ಅಥವಾ ಮುಖದಲ್ಲಿ ವಯಸ್ಕ ಕಳೆಯಿರುವಂತೆ ಕಾಣುತ್ತಿದ್ದರು. ” ಇಂಥಾ ಮುದುಕಿಯರನ್ನು ತಂದು ಮದುವೆಯಾಗು ಅನ್ನುತ್ತೀರಲ್ಲ ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ ” ಎಂದೆಲ್ಲಾ ಕೂಗಾಡುತ್ತಿದ್ದ. ನಾವು ಹೆಣ್ಣು ನೋಡುವುದನ್ನೇ ಬಿಟ್ಟುಬಿಟ್ಟೆವು.

    ಈ ಮಧ್ಯೆ ಅವನಿಗೆ ವಿದೇಶಗಳ ಪ್ರವಾಸಗಳ ಚಟ ಹುಟ್ಟಿತು. ಒಂದೊಂದು ತಿಂಗಳು ರಜೆ ಹಾಕುವುದು ಎಲ್ಲಾ ದೇಶಗಳನ್ನೂ ಸುತ್ತುವುದು. ಅಲ್ಲಿ ಸ್ಟಾರ್ ಹೊಟೆಲ್ಲುಗಳಲ್ಲಿ ಉಳಿದುಕೊಳ್ಳುವುದು ಇತ್ಯಾದಿ ಶುರುಮಾಡಿದ. ಉಳಿಸಿಟ್ಟ ಹಣ ಸಾಕಷ್ಟು ಖರ್ಚಾಯಿತು. ಇದನ್ನು ಬಿಟ್ಟರೆ ಅವನಿಗೆ ಮದ್ಯದ ಚಟವಾಗಲೀ, ಸಿಗರೇಟಿನ ಚಟವಾಗಲೀ ಇಲ್ಲ. ಈ ಸುತ್ತುವ ಚಟ ವಿಪರೀತವಾದಾಗ ಅವನ ಕಂಪನಿಯವರ ಕೆಲಸಕ್ಕೆ ಇವನಿಂದಲೇ ಧಕ್ಕೆಯುಂಟಾಗಿ ಈಗ ಎರಡು ವರ್ಷದ ಕೆಳಗೆ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಪ್ರಯತ್ನ ಪಟ್ಟ. ಆದರೆ ಇವನೇರಿದ ಹುದ್ದೆ ಸಿಗಲಿಲ್ಲ. ಕೆಳಗಿನ ಹುದ್ದೆಗೆ ಸೇರಲು ಇವನ ಅಹಂ ಅಡ್ಡಬಂತು. ನಿರುದ್ಯೋಗಿಯಾದ. ಬ್ಯಾಂಕಿಗೆ ಇಎಂಐ ಕಟ್ಟುವುದು ಕಷ್ಟವಾಗಿ ನಾವು ಆ ದೊಡ್ಡ ಮನೆಯನ್ನು ಬಾಡಿಗೆಗೆ ಕೊಟ್ಟು ನಮ್ಮ ಸಣ್ಣ ಮನೆಗೇ ಬಂದೆವು. ಎರಡು ವರ್ಷಗಳಿಂದ ಮನೆಯಲ್ಲೇ ಇರುವ ಇವನಿಂದ ಬದುಕುವುದೇ ನನಗೂ ನನ್ನ ಹೆಂಡತಿಗೂ ತುಂಬಾ ಕಷ್ಟವಾಗಿದೆ ಮೇಡಂ. ಸಣ್ಣಪುಟ್ಟ ತಪ್ಪುಗಳನ್ನೂ ಹುಡುಕಿ ಕೂಗಾಡುತ್ತಿರುತ್ತಾನೆ. ಮನೆಗೆ ಮೂರು ಕಾಸು ಕೊಡದಿದ್ದರೂ ಸ್ಟಾರ್ ಹೊಟೆಲ್ಲಿನಂತೆ ಅಡುಗೆ ತಿಂಡಿಗಳಿರ ಬೇಕೆಂದು ಬಯಸುತ್ತಾನೆ. ನಾವು ಬಹಳ ವರ್ಷಗಳಿಂದ ಈ ಮನೆಯಲ್ಲಿ ಅಕ್ಕಪಕ್ಕದವರೊಡನೆ ಹೊಂದಿಕೊಂಡು ಮರ್ಯಾದೆಯಿಂದ ಬಾಳುತ್ತಿದ್ದೇವೆ. ಈಗ ಇವನ ಕಿರುಚಾಟಗಳನ್ನು ಕೇಳಿ ನೆರೆಯವರು ಏನೆಂದುಕೊಳ್ಳುತ್ತಾರೋ ಎಂದು ಆತಂಕವಾಗುತ್ತದೆ. ನಾವು ಮದುವೆ ಮಾಡುವ ಪ್ರಯತ್ನವನ್ನೇ ಬಿಟ್ಟಿರುವುದರಿಂದ ಅದಕ್ಕೂ ಕೂಗಾಡುತ್ತಾನೆ. ನಮ್ಮಿಬ್ಬರಿಗೂ ಜೀವನ ನರಕಸದೃಶವಾಗಿಹೋಗಿದೆ. ಇದಕ್ಕೇನು ಪರಿಹಾರ?

    ಉತ್ತರ: ನಿಮ್ಮ ಸಂಕಟ ನಿಜಕ್ಕೂ ದಾರುಣವಾಗಿರುವಂಥದ್ದು. ಸಣ್ಣ ವಯಸ್ಸಿಗೇ ಯಶಸ್ಸಿನ ಮೆಟ್ಟಿಲನ್ನು ಅತ್ಯಂತ ವೇಗವಾಗಿ ಏರಿಬಿಟ್ಟಿರುವ ನಿಮ್ಮ ಮಗನ ಮನಸ್ಸು ಈಗ ಗೊಂದಲದ ಗೂಡಾಗಿದೆ. ಅವರಿಗೆ ತಮ್ಮ ಬಗ್ಗೆ ಅಹಂಕಾರವೂ ಇದೆ ಮತ್ತು ಮದುವೆ, ಕೆಲಸ ಎರಡೂ ಇಲ್ಲದಿರುವುದರಿಂದ ಸ್ವಾನುಕಂಪವೂ ಇದೆ. ಅಲ್ಲದೇ ತಾವೇ ಇದಕ್ಕೆಲ್ಲಾ ಮೂಲ ಕಾರಣವೆನ್ನುವ ತಿಳಿವಳಿಕೆ ಇರುವುದರಿಂದ, ಈಗಿನ ಸ್ಥಿತಿಯ ಬಗ್ಗೆ ಹತಾಶೆಯೂ ಇದೆ. ಇಷ್ಟೆಲ್ಲಾ ಒತ್ತಡಗಳನ್ನು ಅನುಭವಿಸುತ್ತಿರುವ ಅವರು ತಮ್ಮ ಭಾವನೆಯನ್ನು ಹೀಗೆ ಕೋಪದ ಮೂಲಕ ಹೊರಹಾಕುತ್ತಿದ್ದಾರೆ.

    ನೀವು ಇದಕ್ಕೆ ಪರಿಹಾರವನ್ನು ಎರಡು ಮೂರು ರೀತಿಯಲ್ಲಿ ಕಂಡುಕೊಳ್ಳಬಹುದು. ೧ ಯಾವ ಕಾರಣಕ್ಕೆ ಅವರಿಗೆ ಕೋಪ ಬರುತ್ತದೆ ಎನ್ನುವುದನ್ನು ಗಮನಿಸಿ, ಅದನ್ನು ಸಾಕಷ್ಟು ಅವಾಯ್ಡ್ ಮಾಡುವುದು. ಅವರು ಕೋಪದಿಂದ ಕೂಗಾಡಿದರೆ ಪ್ರತಿಕ್ರಯಿಸದೇ ಇರುವುದು. ಇದು ಕಷ್ಟವಾಗುತ್ತದೆ. ನನಗೆ ಗೊತ್ತು ಇಂಥಾ ವಿಷಯ ಪಾಲಿಸುವುದು ಹೇಳಿದಷ್ಟು ಸುಲಭವಲ್ಲ. ಆದರೂ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳ ಬೇಕಾದರೆ ಯಾವುದಾದರೂ ಉಪಾಯಗಳನ್ನು ಕೈಗೊಳ್ಳಲೇ ಬೇಕಲ್ಲ?

    2. ಅವರ ಮನಸ್ಥಿತಿ ತಹಬಂದಿಯಲ್ಲಿದ್ದಾಗ ಆದಷ್ಟು ಸರಳವಾಗಿ ಮಾತಾನಾಡುತ್ತಾ ನಿಮ್ಮ ಅಂತಃಕರಣವನ್ನು ತೋರಿಸುತ್ತಾ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾ ಧನಾತ್ಮಕವಾದ ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಬಾಂಧವ್ಯವನ್ನು ಬಿಗಿಗೊಳಿಸಿಕೊಳ್ಳುವುದು. ಹೀಗೆ ಮಾಡಿದಾಗ ಅವರಿಗೆ ನನ್ನನ್ನು ಇಷ್ಟು ಗೌರವಿಸುವ ಮತ್ತು ಪ್ರೀತಿಸುವ ಅಪ್ಪ ಅಮ್ಮನ ಹತ್ತಿರ ಒರಟಾಗಿ ನಡೆದುಕೊಳ್ಳಬಾರದು ಎಂದು ಒಂದು ಕ್ಷಣವಾದರೂ ಅನ್ನಿಸುತ್ತದೆ.

    3. ಅವರನ್ನು ಹೇಗಾದರೂ ಒಪ್ಪಿಸಿ ಕೌನ್ಸಿಲಿಂಗ್‍ಗೆ ಕರೆದುಕೊಂಡು ಹೋಗುವುದು. ಇದು ಕಷ್ಟಸಾಧ್ಯವೆನ್ನುವುದು ನನಗೆ ಗೊತ್ತಿದೆ. ಆದರೂ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಪಡಲೇ ಬೇಕಾಗುತ್ತದೆ.

    ನಿಮ್ಮ ಮಗನಿಗೆ ಎರಡು ಡಿಸಾರ್ಡರ್ ಬಾಧಿಸುತ್ತಿದೆ. ಪ್ರಾರಂಭದ ಯಶಸ್ಸಿನ ಕಾರಣವಾಗಿ ತನ್ನನ್ನು ತಾನು ಶ್ರೇಷ್ಠ ಮತ್ತು ಯಾರೂ ತನ್ನ ಮಟ್ಟಕ್ಕೇರಲಾರರು ಎನ್ನುವ ಭಾವವನ್ನು ಬೆಳೆಸಿಕೊಂಡು ’ ನಾರ್ಸಿಸ್ಟಿಕ್ ಡಿಸಾರ್ಡರ್ ’ ಬರಿಸಿಕೊಂಡಿದ್ದಾರೆ. ಇದರ ಕಾರಣದಿಂದಲೇ ಯಾವ ಒಂದು ಹುಡುಗಿಯನ್ನೂ ತಮ್ಮ ಬಾಳ ಸಂಗಾತಿಯಾಗಿ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಷ್ಟೆಲ್ಲಾ ನಡೆಮುಡಿಹಾಸಿ ಕರೆದುಕೊಂಡು ಬಂದು ಕೆಲಸ ಕೊಟ್ಟ ಕಂಪನಿಯ ಮೇಲೂ ಕೃತಜ್ಞ ಭಾವ ಬೆಳೆಸಿಕೊಳ್ಳದೇ ’ ತಾನೇ ಸರಿ ’ ಎನ್ನುವ ನಡವಳಿಕೆಯಿಂದ ರಜೆಗಳನ್ನು ಹಾಕಿ ಬೇಜವಾಬ್ದಾರಿಯಿಂದ ನಡೆದುಕೊಂಡ ಕಾರಣಕ್ಕೆ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಇವೆಲ್ಲವೂ ಈ ಮಾನಸಿಕ ವ್ಯತ್ಯಯಗಳಿಂದಲೇ ಆಗಿರುವುದು.

    ಬಹುಶಃ ಈಗ ಅವರಿಗೆ ತಮ್ಮ ತಪ್ಪುಗಳ ಅರಿವಾಗಿದೆ. ಆದರೆ ಅದನ್ನು ಒಪ್ಪಿಕೊಳ್ಳಲೂ ಈ ’ ನಾನೇ ಸರಿ ’ ಡಿಸಾರ್ಡರ್ ಅಡ್ದ ಬರುತ್ತಿದೆ. ಈ ಕಾರಣವಾಗಿ ಈಗ ಅವರಿಗೆ ಮತ್ತೊಂದು ಡಿಸಾರ್ಡರ್ ತಲೆಹಾಕಿದೆ. ಆ್ಯಂಗರ್ ಮ್ಯಾನೇಜ್‍ಮೆಂಟ್ ಡಿಸಾರ್ಡರ್ ಅಂದರೆ ಕೋಪವನ್ನಾಗಲೀ ಅಥವಾ ಯಾವುದೇ ನೇತ್ಯಾತ್ಮಕ ಭಾವನೆಗಳನ್ನಾಗಲೀ ಸಮತೋಲನವಾಗಿ ನಡೆಸಲಾಗದ ದೌರ್ಬಲ್ಯ. ಆದ್ದರಿಂದಲೇ ಅವರ ಭಾವನೆಗಳು ಎರ್ರಾಬೆರ್ರಿಯಾಗಿ ಪ್ರಕಟಗೊಳ್ಳುತ್ತಿವೆ. ಇವನ್ನೆಲ್ಲಾ ನೀವು ಅರ್ಥ ಮಾಡಿಕೊಂಡರೆ ನಿಮಗೇ ನಿಮ್ಮ ಮಗನ ಬಗ್ಗೆ ಇರುವ ಕೋಪ ಮತ್ತು ಬೇಸರಗಳ ಜಾಗದಲ್ಲಿ ಅನುಕಂಪ ಹುಟ್ಟಬಹುದು. ಮತ್ತು ಅದರ ನಿವಾರಣೆಗೆ ಬೇರೆ ಬೇರೆ ದಾರಿಗಳು ತೋರಬಹುದು.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಒಂದೆಡೆ ಕಷ್ಟಪಟ್ಟು ಸಿಕ್ಕ ಉದ್ಯೋಗ… ಇನ್ನೊಂದೆಡೆ ಇಷ್ಟಪಟ್ಟ ಹುಡುಗ: ಪ್ಲೀಸ್‌ ಗೊಂದಲ ಬಗೆಹರಿಸಿ ಮೇಡಂ…

    ಮಗ ಮದುವೆ ಎಂದ್ರೆ ಮೂಗು ಮುರೀತಾನೆ- ಇವನ ಸಮಸ್ಯೆ ಏನೆಂದು ಹೇಗೆ ಅರ್ಥ ಮಾಡಿಕೊಳ್ಳೋದು?

    ಕಣ್ಣುಮಿಟುಕಿಸಿ ಮೆಸೇಜ್​ನಲ್ಲಿ ಮಾತನಾಡಿದ ಆಕೆಯೇ ಬಾಳಸಂಗಾತಿ ಅಂತ ಅದ್ಹೇಗಪ್ಪಾ ಅಂದ್ಕೊಂಡ್​ಬಿಟ್ಟಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts