ಹಿಂದುಗಳ ಮೇಲೆ ನಡೆಯುತ್ತಿರುವ ಕ್ರೌರ್ಯ ತಡೆಯಿರಿ : ರವಿಶಂಕರ ಗುರೂಜಿ ಒತ್ತಾಯ

vishwa
Published on

ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಮೃಗೀಯ ವರ್ತನೆ ನಿಲ್ಲಬೇಕು. ಅಲ್ಲಿನ ಸರ್ಕಾರವು ತಕ್ಷಣ ನಮ್ಮ ಸಮಾಜದವರ ರಕ್ಷಣೆಗೆ ಮುಂದಾಗಬೇಕೆಂದು ಆರ್ಟ್​ ಆಫ್​​​ ಲಿವಿಂಗ್​ ಫೌಂಡೇಷನ್​​ ಸಂಸ್ಥಾಪಕ ರವಿಶಂಕರ ಗುರೂಜಿ ಒತ್ತಾಯಿಸಿದ್ದಾರೆ.

ಶಂಕರಪುರದ ಶಂಕರಮಠದ ಸಮಾನಾಂತರ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಶ್ವ ಹಿಂದು ಪರಿಷದ್​- ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯದ ನೂತನ "ಧರ್ಮಶ್ರೀ ಭವನ' ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಬಾಂಗ್ಲಾದೇಶದ ಸಮಸ್ಯೆ ವಿಶ್ವಕ್ಕೆ ಗೊತ್ತಾಗಿದೆ. ಈ ವಿಷಯವೂ ಹೆಚ್ಚು ಆತಂಕದಿಂದ ಕೂಡಿದೆ. ಶೋಷಣೆಗೆ ಒಳಗಾಗಿ ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಹಿಂದುಗಳ ರಕ್ಷಣೆಗೆ ಅಲ್ಲಿನ ಸರ್ಕಾರ ಧಾವಿಸಬೇಕು. ಅವರ ಅಸ್ತಿ-ಪಾಸ್ತಿಗಳನ್ನು ಪುನರ್​ ಪ್ರತಿಷ್ಠಾಪಿಸಬೇಕು. ಕಿರುಕುಳಕ್ಕೆ ಒಳಗಾಗಿರುವ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಭಾರತ-ಬಾಂಗ್ಲಾ ಗಡಿ ಭಾಗದಲ್ಲಿ ಪ್ರಾಣ ರಕ್ಷಣೆಗಾಗಿ ಕುಳಿತಿರುವ ಹಿಂದುಗಳಿಗೆ ಮನೋಸ್ಥೈರ್ಯ ತುಂಬುವ ಕೆಲಸವಾಗಬೇಕು. ಕೆಲ ಸಮಾಜದವರಿಗೆ ಹಿಂಸೆ ಎನ್ನುವುದು ಹೆಮ್ಮೆ,ಗರಿಮೆಯಾಗಿದೆ ಎಂದು ರವಿಶಂಕರ ಗುರೂಜಿ ಬೇಸರ ವ್ಯಕ್ತಪಡಿಸಿದರು.

ಹಿಂದುಗಳ ಶಾಂತಿಪ್ರಿಯತೆ ಬಲಹೀನವಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಹಿಂದುಗಳು ಸಂಪತ್ತು ಸೃಷ್ಟಿ ಮಾಡುತ್ತಾರೆ. ಆದರೆ, ಕೆಲ ಸಮಾಜದವರು ಸಮಸ್ಯೆ ಉಂಟು ಮಾಡುತ್ತಾರೆ. ಜಾತಿಗಳ ಹೆಸರಿನಲ್ಲಿ ನಮ್ಮ ಸಮಾಜವನ್ನು ವಿಭಜಿಸಲಾಗುತ್ತಿದೆ. ಇವುಗಳನ್ನು ಒಟ್ಟುಗೂಡಿಸುವ ಕೆಲಸವಾಗಬೇಕಿದೆ. ಹಾಗಾಗಿ, ನಾವೆಲ್ಲರೂ ಬಲಿಷ್ಠರಾಗಿ ಸಂಟಿತರಾದರೆ ಗಟ್ಟಿಯಾಗಿ ಧ್ವನಿ ಎತ್ತಲು ಸಾಧ್ಯ. ಹಿಂದುಗಳು ಒಗ್ಗಟ್ಟಾಗುವ ಮೂಲಕ ನಮ್ಮ ಧರ್ಮದ ಶೌರ್ಯವನ್ನು ಎತ್ತಿ ಹಿಡಿಯಬೇಕು. ನಮ್ಮವರು ಸಂಟಿತರಾಗಿ ಕೆಲವು ಕಡೆ ಅನಿವಾರ್ಯ ಉದ್ಬವಿಸಿದರೆ ಬಲದಿಂದ, ಇನ್ನೂ ಕೆಲ ಕಡೆಗಳಲ್ಲಿ ಮಧುರದಿಂದ ಸವಾಲು ಎದುರಿಸುವಂತಾಗಬೇಕು. ಬೌದ್ಧ, ಜೈನ್​, ಸಿಖ್​ ಸಮಾಜವನ್ನು ಹಿಂದುಗಳ ಜತೆಗೆ ತೆಗೆದುಕೊಂಡು ಹೋಗವ ಕಾರ್ಯವಾಗಬೇಕು. ಆತ್ಮವಿಶ್ವಾಸದಿಂದ ನಾವೆಲ್ಲರೂ ಹಿಂದುಯೆಂದು ಹೇಳಬೇಕು ಎಂದು ರವಿಶಂಕರ ಗುರೂಜಿ ತಿಳಿಸಿದರು.

ವಿಶ್ವ ಹಿಂದು ಪರಿಷದ್​ ಅಧ್ಯಕ್ಷ ಅಲೋಕ್​ ಕುಮಾರ್​, ಕೇಂದ್ರೀಯ ಉಪಾಧ್ಯೆ ಮತ್ತು ಪ್ರಾಂತ ಅಧ್ಯೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್​ ಸೇರಿ ಮತ್ತಿತರರಿದ್ದರು.

ಹಿಂದುಗಳು ಸಂಘಟಿತಾರಾಗಲಿ

ಮತ-ಪಂಥ ಮೂಲಕ ಪರಸ್ಪರ ದ್ವೇಷ ಬಿತ್ತರಿಸುತ್ತಿರುವುದು, ಹಿಂಸೆ ಆಧಾರದಲ್ಲಿ ಮತಾಂತರ ಮಾಡುತ್ತಿರುವುದು, ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಪ್ರಯತ್ನ ಜಾಸ್ತಿ ದಿನಗಳು ನಡೆಯುವುದಿಲ್ಲ. ಶಾಂತವಾಗಿರುವ ಹಿಂದು ಸಮಾಜ, ಜಾಗೃತಗೊಂಡು ಸಂಘಟಿತವಾಗಿ ಧ್ವನಿ ಎತ್ತಿದ್ದರೆ ಕಾಶ್ಮೀರ ವಿಚಾರದ ಕುರಿತು ಯಾರೂ ಮಾತಾಡುವುದಿಲ್ಲ. ಅದೇರೀತಿ, ಬೇರೆ ದೇಶಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಿಂದುಗಳ ಮಾನ, ಪ್ರಾಣ, ಆಸ್ತಿ-ಪಾಸ್ತಿ ರಕ್ಷಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ(ಆರ್​ಎಸ್​ಎಸ್​) ಸರಕಾರ್ಯವಾಹರು ದತ್ತಾತ್ರೇಯ ಹೊಸಬಾಳೆ ಹೇಳಿದರು. ಮತ, ಪಂಥ, ಅಸ್ಪೃಶ್ಯತೆ, ಜಾತಿ,ಭಾಷಾ, ರಾಜಕೀಯ ಮತ್ತು ಪ್ರಾಂತ ಆಧಾರದಲ್ಲಿ ಹಿಂದು ಸಮಾಜವನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ. ಹಿಂದು ಸಮಾಜದ ದುರ್ಬಲವಾದರೆ ಜಗತ್ತಿಗೆ ಶಾಂತಿ, ಧರ್ಮದ ಮಾರ್ಗ ಹೇಳುವವರು ಯಾರು ಇರುವುದಿಲ್ಲ. ಹಾಗಾಗಿ, ನಾವೆಲ್ಲರೂ ಒಗ್ಗಟ್ಟು ಆಗಬೇಕು. ಯಾವುದೇ ರಾಜಕೀಯ ಪಕ್ಷದಲ್ಲಿರಲಿ, ಧರ್ಮ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಕಲಿಯುಗದಲ್ಲಿ ಭಗವಂತನ ಅವಾತರ ಮೂಲಕ ನಾವೆಲ್ಲರೂ ಬಲಿಷ್ಠರಾಗಿ ಸಂಘಟಿತರಾದರೆ ಮಾತ್ರ ಧರ್ಮ ರಕ್ಷಣೆ ಕಾರ್ಯವಾಗಲಿದೆ. ಜತೆಗೆ, ಸಂಘಟನೆ ಸ್ವರೂಪ ಜಗತ್ತಿಗೂ ಅರಿವಾಗುತ್ತದೆ ಎಂದರು.

ಬರುವ ದಿನಗಳಲ್ಲಿ ಎಲ್ಲ ಸವಾಲುಗಳನ್ನು ಎದರಿಸಲು ನಾವು ಸಜ್ಜಾಗಬೇಕಿದೆ. ಮುಂದಿನ ಜನಾಂಗಕ್ಕೆ ಹಿಂದು ಧರ್ಮವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಇನ್ನಷ್ಟು ಕಾರ್ಯನ್ಮುಖವಾಗಬೇಕಿದೆ. ಶೃಂಗೇರಿ ಮಠದವರು ನಮಗೆ ಉಚಿತವಾಗಿ ಕೊಟ್ಟಿರುವ ಜಾಗದಲ್ಲಿ ಜನರು ಕೊಟ್ಟಿರುವ ದೇಣಿಗೆಯಲ್ಲಿ ಐದು ಅಂತಸ್ತಿನ "ಧರ್ಮಶ್ರೀ' ಭವನ ಕಟ್ಟಡ ಕಟ್ಟಲು ಸಾಧ್ಯವಾಯಿತು. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

| ಜಗನ್ನಾಥ ಶಾಸ್ತ್ರೀ. ಪ್ರಾಂತ ಕಾರ್ಯದರ್ಶಿ, ವಿಶ್ವ ಹಿಂದು ಪರಿಷದ್​-ಕರ್ನಾಟಕ ದಕ್ಷಿಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net