ಈ ವಿಚಾರದಲ್ಲಿ ವಿರಾಟ್​ ಕೊಹ್ಲಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ! ದಿನೇಶ್​ ಕಾರ್ತಿಕ್​ ಅಚ್ಚರಿ ಹೇಳಿಕೆ

Virat Kohli
Published on

ನವದೆಹಲಿ: ಈ ಒಂದು ವಿಚಾರದಲ್ಲಿ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಭಾರತ ತಂಡದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಡಿಕೆ ಯಾವ ವಿಚಾರದಲ್ಲಿ ಕೊಹ್ಲಿಯನ್ನು ಬೆಂಬಲಿಸಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್​ ಮಾಹಿತಿ.

ವಾಸ್ತವವಾಗಿ ಡಿಕೆ ಹಾಗೂ ಕೊಹ್ಲಿ ನಡುವೆ ಉತ್ತಮ ಬಾಂಧವ್ಯ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಐಪಿಎಲ್‌ನಲ್ಲಿ ಇಬ್ಬರೂ ಒಟ್ಟಿಗೆ ಆಡಿದ್ದಾರೆ. ಅಲ್ಲದೆ ಟೀಮ್​ ಇಂಡಿಯಾ ಪರ ಹಲವು ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಇತ್ತೀಚೆಗೆ ವಿರಾಟ್ ಕೊಹ್ಲಿ, ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಕೊಲಂಬೋ ಪಿಚ್​ನಲ್ಲಿ ಕೊಹ್ಲಿ ಅಬ್ಬರಿಸುತ್ತಾರೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಆಗಿದ್ದೇ ಬೇರೆ.

ಏಕದಿನ ಸರಣಿಯಲ್ಲಿ ಕೊಹ್ಲಿ ವೈಫಲ್ಯ ಟೀಮ್​ ಇಂಡಿಯಾದ ಮೇಲೆ ತೀವ್ರ ಪರಿಣಾಮ ಬೀರಿತು. ಆರಂಭದಲ್ಲಿ ರೋಹಿತ್ ಶರ್ಮ ಉತ್ತಮ ಆರಂಭ ನೀಡಿದರೂ ಕೊಹ್ಲಿಗೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಪಿಚ್ ಸ್ವಲ್ಪಮಟ್ಟಿಗೆ ಸ್ಪಿನ್ ಬೌಲಿಂಗ್‌ಗೆ ಹೊಂದಿಕೊಂಡಿದ್ದರಿಂದ, ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಮೂರು ಪಂದ್ಯಗಳಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಕೇವಲ 24 ರನ್, ಎರಡನೇ ಏಕದಿನ ಪಂದ್ಯದಲ್ಲಿ 14 ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ 20 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ಮೂರೂ ಪಂದ್ಯಗಳಲ್ಲಿ ಕೊಹ್ಲಿ ಸ್ಪಿನ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯುಗೆ ಔಟಾಗಿರುವುದು ಗಮನಾರ್ಹ.

ವಿರಾಟ್​ ಕೊಹ್ಲಿ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಕಾರ್ತಿಕ್, ಇಲ್ಲಿ ಕೊಹ್ಲಿ ಹಿಂದುಳಿದಿದ್ದಾರೆ ಎಂದು ಅರ್ಥವಲ್ಲ. ಶ್ರೀಲಂಕಾದಂತಹ ಸ್ಪಿನ್​ ಪಿಚ್​ಗಳಲ್ಲಿ ಆಡುವುದು ಯಾವುದೇ ಬ್ಯಾಟ್ಸ್​ಮನ್​ಗೆ ಕೊಂಚ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ 8 ರಿಂದ 30 ಓವರ್‌ಗಳ ನಡುವೆ ಸ್ಪಿನ್ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿಯೇ ಕೊಹ್ಲಿ ಅಲ್ಲಿ ಕೊಂಚ ಎಡವಿದರು. ಇಲ್ಲಿ ನಾನು ಕೊಹ್ಲಿಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಅವರನ್ನು ಬಿಟ್ಟುಕೊಡುವುದಿಲ್ಲ. ಏಕೆಂದರೆ, ಇಂತಹ ಪಿಚ್​ನಲ್ಲಿ ಆಡುವುದು ತುಸು ಕಷ್ಟ ಎಂದು ಡಿಕೆ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net