

ಹೈದರಾಬಾದ್: ಫಾರ್ಮಾ ಕಂಪನಿಯೊಂದಕ್ಕೆ ಭೂಸ್ವಾಧೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಕಾರಬಾದ್(Hyderabad) ಪ್ರಾಂತ್ಯದಲ್ಲಿ ರೈತರು ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಮತ್ತು ಹಲವು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳು ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಲಗಚೆರ್ಲಪಲ್ಲಿ ಗ್ರಾಮದ ರೈತರ ಬಳಿ ತೆರಳಿದ್ದರು. ಇನ್ನು ಡಿಸಿ ಬರುತ್ತಿದ್ದಂತೆ, 'ಕಲೆಕ್ಟರ್ ಡೌನ್ ಡೌನ್', 'ಗೋಬ್ಯಾಕ್ ಕಲೆಕ್ಟ್ರ್' ಎಂಬ ಘೋಷಣೆಗಳನ್ನು ರೈತರು ಕೂಗಿದ್ದಾರೆ. ಏಕಾಏಕಿ ನೂರಾರು ರೈತರು ಜಮಾಯಿಸಿ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಕೊಡಂಗಲ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೆಂಕಟ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ(ಎಡಿಸಿ) ಲಿಂಗ್ಯಾನಾಯಕ್ ಮತ್ತು ಡಿಎಸ್ಪಿ ಶ್ರೀನಿವಾಸ್ ರೆಡ್ಡಿ ಅವರಿಗೆ ಗಾಯಗಳಾಗಿವೆ ಎಂದು ವರದಿಗಳು ಉಲ್ಲೇಖಿಸಿದೆ.
ಮೂವರು ಡಿಎಸ್ಪಿ ಮತ್ತು 170 ಪೊಲೀಸ್ ಅಧಿಕಾರಿಗಳು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರೂ ಹಿಂಸಾತ್ಮಕ ಘಟನೆ ನಡೆದಿದೆ. ಇನ್ನು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಈವರೆಗೆ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸರ್ಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿ ಜೈನ್ ಅವರ ಪರ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ 'ರೈತರು ದಾಳಿ' ನಡೆಸಿದ್ದಾರೆ ಎಂಬ ಪದವನ್ನು ಉಲ್ಲೇಖಿಸಿದ್ದು, ರೈತರ ದಾಳಿ ಎನ್ನ ಬೇಡಿ ಅವರು ನಮ್ಮ ಜನರು, ನಮ್ಮ ರೈತರು. ಅವರು ಕೆರದಿದ್ದರಿಂದ ನಾನು ಸ್ಥಳಕ್ಕೆ ಹೋಗಿದ್ದೇನೆ. ಇದರ ಹಿಂದೆ ಪಿತೂರಿ ಇದೆ. ಅವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ತೆಲಂಗಾಣ ರಾಜ್ಯದಲ್ಲಿ ಇದೇ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಬ್ಬರ ಮೇಲೆ ಒಬ್ಬರು ತೀವ್ರ ಹರಿಹಾಯುತ್ತಿದ್ದಾರೆ. (ಏಜೆನ್ಸೀಸ್).